ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ: ಡಿಕೆ ಶಿವಕುಮಾರ್.

ಹುಬ್ಬಳ್ಳಿ: ”ನಾನು ಮುಖ್ಯಮಂತ್ರಿ ಆಗಲಿ ಎಂದು ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ” ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ನುಡಿದರು.
ವರೂರು ನವಗ್ರಹ ತೀರ್ಥಕ್ಷೇತ್ರದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ”ವಿನಯ್ ಗುರೂಜಿ ಅವರು ಈ ಮಾತನ್ನು ಹೇಳಿದ್ದರು. ಈಗ ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ. ಆದರೆ, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರ್ತಾರೆ” ಎಂದು ಮಾರ್ಮಿಕವಾಗಿ ಮಾತನಾಡಿದರು.
”ಅಹಿಂಸೆ, ಸತ್ಯ, ತ್ಯಾಗಕ್ಕೆ ಮತ್ತೊಂದು ಹೆಸರೇ ಜೈನ ಧರ್ಮ. ಈ ಡಿಕೆ ಶಿವಕುಮಾರ್ ನಿಮ್ಮ ಧರ್ಮದ ಜೊತೆಗೆ ಇರ್ತಾನೆ. ನನ್ನ ಮೇಲೆ ನಂಬಿಕೆ ಇಡಿ. ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ. ಸಿಎಂ ಜೊತೆ ಮಾತನಾಡಿ, ಮುಂಬರುವ ಬಜೆಟ್ನಲ್ಲಿಯೇ ರಚನೆ ಮಾಡಲು ಮನವಿ ಮಾಡ್ತೇನೆ. ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ನಮ್ಮ ಕಾಂಗ್ರೆಸ್. ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲಾಗಿದೆ. ನಮ್ಮ ಸರ್ಕಾರ, ನಮ್ಮ ಪಕ್ಷ ನಿಮ್ಮ ಜೊತೆಗೆ ಇರುತ್ತೆ” ಎಂದು ಭರವಸೆ ನೀಡಿದರು.