ಮೈಕ್ರೋ ಫೈನಾನ್ಸ್ಗಳ ವಿರುದ್ಧ ಹೋರಾಟಕ್ಕಿಳಿದ ಮೃತನ ಪತ್ನಿ.

ರಾಯಚೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳಕ್ಕೆ ಸಾಲ ಪಡೆದ ಕಡುಬಡವರು ದಿಕ್ಕೆಟ್ಟು ಓಡುವಂತೆ ಮಾಡಿದೆ. ಸದ್ಯ ಗಡಿ ಜಿಲ್ಲೆಯಲ್ಲಿ ಇವರ ಕಿರುಕುರಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಇದೀಗ ಆ ಮೃತನ ಪತ್ನಿ ತನ್ನ ಮಾಂಗಲ್ಯ ಸರವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕಳುಹಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಮೈಕ್ರೋ ಫೈನಾನ್ಸ್ಗಳ ಕಿರುಕುಳ ಹೆಚ್ಚಾಗುತ್ತಲೇ ಇದೆ. ಈ ಕಾರಣದಿಂದ ಇದೇ ಜನವರಿ 17 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಶರಣಬಸವನಿಗೆ ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಟಾರ್ಚರ್ ಕೊಡುತ್ತಿದ್ದರಂತೆ. ಈ ಬಗ್ಗೆ ಗೊತ್ತಾದ ಬಳಿಕ ಇದೇ ಗ್ರಾಮದ ಹಲವರು ಕೂಡ ಫೈನಾನ್ಸ್ ಕಂಪನಿ ಕಣ್ತಪ್ಪಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ಇದರ ಬೆನ್ನಲ್ಲೇ ಈಗ ಮೃತ ಶರಣಬಸವನ ಕುಟುಂಬ ನ್ಯಾಯಕ್ಕಾಗಿ ಹೋರಾಟಕ್ಕೆ ಸಜ್ಜಾಗಿದೆ.
ಶರಣಬಸವ ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಂತೆ. ಇದೇ ಕಾರಣಕ್ಕೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಈಗ ಮೃತನ ಕುಟುಂಬ ಇಂದು ಸ್ಥಳೀಯ ಹೋರಾಟಗಾರರ ಜೊತೆಗೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಘಟನೆ ನೆನೆದು ಮೃತನ ಪತ್ನಿ ಕಣ್ಣೀರಿಟ್ಟಿದ್ದಾರೆ.