ಮಂಗಳೂರು

14 ಮಂದಿ ರಾಮಸೇನೆ ಕಾರ್ಯಕರ್ತರು ಹಾಗೂ ಕ್ಯಾಮರಾಮ್ಯಾನ್ಗಳ ಬಂಧನ.

ಮಂಗಳೂರು: ನಗರದ ಬಿಜೈನಲ್ಲಿರುವ ಕಲರ್ಸ್​​ ಯುನಿಸೆಕ್ಸ್ ಸೆಲೂನ್ ಮೇಲೆ ದಾಳಿ ನಡೆಸಿ ಗಾಜು, ಪೀಠೋಪಕರಣ ಧ್ವಂಸ ಮಾಡಿದ ಪ್ರಕರಣ ಸಂಬಂಧ 14 ಮಂದಿ ರಾಮಸೇನೆ ಕಾರ್ಯಕರ್ತರು ಹಾಗೂ ಸ್ಥಳೀಯ ಚಾನೆಲ್​ನ ಕ್ಯಾಮರಾಮ್ಯಾನ್ ಸಹಿತ 14 ಮಂದಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕ್ಯಾಮರಾಮ್ಯಾನ್ ಶರಣ್ ರಾಜ್, ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ್, ಕಾರ್ಯಕರ್ತರಾದ ಫರಂಗಿಪೇಟೆಯ ಹರ್ಷರಾಜ್, ವಾಮಂಜೂರಿನ ಮೋಹನ್ ದಾಸ್, ಕಾಸರಗೋಡಿನ ಪುರಂದರ, ವಾಮಂಜೂರಿನ ಸಚಿನ್, ರವೀಶ್, ಬೆಂಜನಪದವಿನ ಸುಕೇತ್, ವಾಮಂಜೂರಿನ ಅಂಕಿತ್, ಕಾಳಿ ಮಟ್ಟು, ಬೊಂಡಂತಿಲದ ಅಭಿಲಾಷ್, ವಾಮಂಜೂರಿನ ದೀಪಕ್, ನೀರುಮಾರ್ಗದ ವಿಘ್ನೇಶ್ ಹಾಗೂ ವಾಮಂಜೂರಿನ ಪ್ರದೀಪ್ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು(ಗುರುವಾರ) ಬೆಳಗ್ಗೆ ಸುಮಾರು 11:50ಕ್ಕೆ, 11 ಜನರ ಗುಂಪು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ಸ್ ಎಂಬ ಯೂನಿಸೆಕ್ಸ್ ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿತ್ತು. ಸೆಲೂನ್​ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಮಹಿಳಾ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿದ್ದರು. ಅಷ್ಟು ಮಾತ್ರವಲ್ಲದೇ ಸೆಲೂನ್ ಉಪಕರಣಗಳನ್ನು ಧ್ವಂಸಗೊಳಿಸಿ, ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆಲೂನ್ ಮಾಲೀಕ ನೀಡಿದ ದೂರಿನ ಆಧಾರದ ಮೇಲೆ, ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 06/2025ರ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. BNS ಸೆಕ್ಷನ್ 329(2), 324(5), 74, 351(3), 115(2), 109, 352, ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Back to top button