ಹೈಬ್ರಿಡ್ ಅಬ್ಬರಕ್ಕೆ ಸಿಲುಕಿ ದೇಸಿ ತಳಿಗಳು ಕಣ್ಮರೆ ; ದೇಶಿ ತಳಿಗಳ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ

ಬೆಂಗಳೂರು : ಹೈಬ್ರಿಡ್ ಅಬ್ಬರಕ್ಕೆ ಸಿಲುಕಿ ದೇಸಿ ತಳಿಗಳು ಕಣ್ಮರೆಯಾಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದಲೂ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅದೇ ರೀತಿ ರೈತರು ಸಹ ದೇಸಿ ತಳಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಪ್ರಮುಖವಾಗಿ ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ಗುಂಡ್ಯಾನಟ್ಟಿ ಗ್ರಾಮದ ರೈತ ಶಂಕರ ಹನುಮಂತ ಲಂಗಟಿ ಹಾಗೂ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಅವರು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರಿಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಮಳಿಗೆಗಳನ್ನು ಹಾಕಿಕೊಂಡಿದ್ದಾರೆ.
ಇಲ್ಲಿ ದೇಶಿ ತಳಿಗಳ ಪ್ರದರ್ಶಿಸುವುದರ ಜೊತೆಗೆ ಆ ತಳಿಗಳ ಮಹತ್ವದ ಬಗ್ಗೆ ರೈತರಿಗೆ ತಿಳಿಸುತ್ತಿದ್ದಾರೆ.ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ರೈತ ಶಂಕರ ಹನುಮಂತ ಲಂಗಟಿ ಅವರು 210 ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಔಷಧ ಗುಣಗಳನ್ನು ಹೊಂದಿರುವ ಭತ್ತದ ದೇಶಿ ತಳಿ, ಬರ ನಿರೋಧಕ, ರೋಗ ನಿರೋಧಕ, ಬಾಣಂತಿ ಅಕ್ಕಿ, ಡಯಾಬಿಟಿಸ್ನವರಿಗೆ ಅನುಕೂಲವಾಗುವಂತಹ ಅಕ್ಕಿ ಸೇರಿದಂತೆ ಹಲವು ರೀತಿ ಭತ್ತವನ್ನು ಅವರು ಬೆಳೆಯುತ್ತಿದ್ದಾರೆ.