ಮೈಕ್ರೋ ಫೈನಾನ್ಸ್ನಿಂದ ಮನೆಗೆ ಬೀಗ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಾಯದಿಂದ ಬಾಣಂತಿ ಮನೆಗೆ ವಾಪಸ್.

ಬೆಳಗಾವಿ : ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸಾಲ ತುಂಬದ ಹಿನ್ನೆಲೆ ಮನೆಗೆ ಬೀಗ ಜಡಿದು ಬಾಣಂತಿ, ಹಸುಗೂಸು ಮತ್ತು ಮನೆಯವರನ್ನೆಲ್ಲ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊರ ಹಾಕಿದ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಆ ಕುಟುಂಬಕ್ಕೆ ವಾಪಸ್ ಮನೆಯನ್ನು ಹಸ್ತಾಂತರಿಸಲಾಗಿದೆ.
ತಾರಿಹಾಳ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಪಡಿಸಿಕೊಂಡಿದ್ದ ಫೈನಾನ್ಸ್ ಸಿಬ್ಬಂದಿ, ಬಾಣಂತಿ, ಹಸುಗೂಸು ಅಂತಾನೂ ನೋಡದೇ ಪಾತ್ರೆ, ಬಟ್ಟೆಗಳನ್ನು ಹೊರಗೆ ಎಸೆದು ಮನೆಗೆ ಬೀಗ ಜಡಿದು, ಮನೆ ಹರಾಜಿಗಿದೆ ಎಂದು ಬರೆದಿದ್ದರು. ಬಳಿಕ ದಿಕ್ಕೆ ತೋಚದಂತಾಗಿ ಮನೆ ಪಕ್ಕದ ಶೆಡ್ನಲ್ಲಿ ಬಾಣಂತಿ, ಹಸಗೂಸು ಕೆಲಕಾಲ ಕಳೆದಿದ್ದರು.
ಫೈನಾನ್ಸ್ನವರ ಜತೆ ಮಾತಾಡಿ ಮನೆ ವಾಪಸ್ ಕೊಡಿಸಿದ ಸಚಿವೆ: ಈ ವಿಚಾರ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ಬರುತ್ತಿದ್ದಂತೆ ಅವರ ಆಪ್ತಸಹಾಯಕರ ಮೂಲಕ ಖಾಸಗಿ ಫೈನಾನ್ಸ್ನವರ ಜೊತೆಗೆ ಮಾತಾಡಿ, ಮನೆಯನ್ನು ವಾಪಸ್ ಕೊಡಿಸಿದ್ದಾರೆ. ವಾಪಸ್ ತಮ್ಮ ಮನೆಗೆ ಬರುತ್ತಿದ್ದಂತೆ ಇಡೀ ಕುಟುಂಬ ಭಾವುಕವಾಗಿತ್ತು. ಅಲ್ಲದೇ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ಕೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ ಎಂದರು.
ಈ ಕುರಿತು ಮಾತನಾಡಿದ ಬಾಣಂತಿ ಮಧು ಬಡಿಗೇರ, ನಿನ್ನೆ ರಾತ್ರಿ ಹೊರಗಡೆ ನಮಗೆ ಮಲಗಲು ಆಗಲಿಲ್ಲ. ಹಾಗಾಗಿ, ನಮ್ಮ ಚಿಕ್ಕಪ್ಪ ರಾತ್ರಿ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಣ್ಣು-ಹಂಪಲು ಕೊಟ್ಟು ಕಳಿಸಿದ್ದರು. ಅಲ್ಲದೇ ಫೈನಾನ್ಸ್ ಕಡೆಯಿಂದ ಮನೆ ಕೀಲಿ ವಾಪಸ್ ಕೊಡಿಸಿದ್ದಾರೆ. ಹಾಗಾಗಿ, ಹೆಬ್ಬಾಳ್ಕರ್ ಮೇಡಂ ಮತ್ತು ನಮ್ಮೂರಿನ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.