ನಿರಾಶ್ರಿತ ಕುಟುಂಬಗಳೊಂದಿಗೆ ಸಭೆ ನಡೆಸಿದ ಶಾಸಕ ಸತೀಶ್ ಸೈಲ್.

ಕಾರವಾರ: ಅಂಕೋಲಾದ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂಸ್ವಾದೀನಗೊಳಕ್ಕೊಳಗಾದ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ನಿವೇಶನ ಹಂಚಿಕೆಗೆ ಗುರುತಿಸಿರುವ ಜಾಗಕ್ಕೆ ಬಹುತೇಕ ನಿರಾಶ್ರಿತರು ಸಹಮತ ಸೂಚಿಸಿದ್ದಾರೆ. ಆದರೆ, ಅಗತ್ಯ ಮೂಲ ಸೌಕರ್ಯ ಸಂಪೂರ್ಣ ಕಲ್ಪಿಸಿದ ಬಳಿಕವೇ ಈಗಿರುವ ಮನೆ ಜಮೀನು ತೊರೆಯುವುದಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಶಾಸಕ ಸತೀಶ್ ಸೈಲ್ ಹಾಗೂ ಅಪರ ಜಿಲ್ಲಾಧಿಕಾರಿ ಸಾಜಿದ್ಮುಲ್ಲಾ ಅವರ ಸಮ್ಮುಖದಲ್ಲಿ ನಿರಾಶ್ರಿತ ಕುಟುಂಬಗಳೊಂದಿಗೆ ಸಭೆ ನಡೆಯಿತು. ಈ ವೇಳೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ, ”ವಿಮಾನ ನಿಲ್ದಾಣ ಸಂಬಂಧ ಈಗಾಗಲೇ 87 ಎಕರೆ ಜಮೀನು ಭೂಸ್ವಾದೀನ ಪ್ರಕ್ರಿಯೆಗೆ ಒಳಪಟ್ಟಿದ್ದು, ಇದಕ್ಕೆ ಪರಿಹಾರ ಕೂಡ ಬಿಡುಗಡೆಯಾಗಿದೆ” ಎಂದರು.60*90 ನಿವೇಶನ: ”ಹೆಚ್ಚುವರಿಯಾಗಿ ಮತ್ತೆ 6 ಎಕರೆ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದ್ದು, ಇದು ಸರ್ಕಾರದ ಮಟ್ಟದಲ್ಲಿ ಅಂತಿಮ ಹಂತದಲ್ಲಿದೆ. ಇದರ ಸರ್ವೇ ಕಾರ್ಯ ನಡೆಸಿ, ಭೂಮಿ ಕಳೆದುಕ್ಕೊಳ್ಳುವವರಿಗೆ ಸದ್ಯದಲ್ಲಿಯೇ ಪರಿಹಾರ ವಿತರಿಸುವ ಕಾರ್ಯ ನಡೆಸಲಾಗುವುದು. ಇದೀಗ ಈ ಕುಟುಂಬಗಳಿಗೆ ಪುನರ್‌ವಸತಿಗೆ ಅಂಕೋಲಾದ ಬೋರ್ಗಿಬೈಲ್, ಕವಲಳ್ಳಿ, ಹೊಸಗದ್ದೆ, ಬೆಳಸೆ ಸೇರಿ ನಾಲ್ಕು ಕಡೆ ಜಾಗ ಗುರುತಿಸಿದ್ದು, 60*90 ನಿವೇಶನಗಳನ್ನು ನೀಡಲು ನಿರ್ಧರಿಸಲಾಗಿದೆ” ಎಂದು ಅಪರ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.