ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

ಧಾರವಾಡ: ವಿಜಯಪುರದಲ್ಲಿ ದಲಿತ ಮುಖಂಡನೊಬ್ಬ ಅಮಿತ್ ಶಾ ನಾಲಿಗೆ ಕತ್ತರಿಸಿದವರಿಗೆ ಬಹುಮಾನ ಘೋಷಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದು, ಆ ರೀತಿ ಬಹುಮಾನ ಘೋಷಣೆ ಮಾಡಿದವರೆಲ್ಲ ಕಾಂಗ್ರೆಸ್ ಕಾರ್ಯಕರ್ತರೇ ಆಗಿರುತ್ತಾರೆ ಎಂದಿದ್ದಾರೆ.
ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಬದಲಿಗೆ ದಲಿತ ನಾಯಕರ ಹೆಸರು ಹೇಳುತ್ತಾರೆ. ಕಾಂಗ್ರೆಸ್ ಜೊತೆಗೆ ಇರುವ ದಲಿತ ನಾಯಕರೇ ಹೀಗೆ ಮಾತನಾಡುತ್ತಾರೆ. ದಲಿತರಿಗೆ ಹೆಚ್ಚು ನ್ಯಾಯ ಸಿಕ್ಕಿದ್ದೇ ಬಿಜೆಪಿ ಅವಧಿಯಲ್ಲಿ. ಇದು ಉಳಿದೆಲ್ಲ ದಲಿತ ನಾಯಕರಿಗೆ ಗೊತ್ತಿದೆ. ಐವತ್ತು ವರ್ಷದ ಮೀಸಲಾತಿ ಮುಂದುವರಿಕೆ ಆಗುವ ವಿಚಾರ ಇತ್ತು. ಇದನ್ನು ಮುಂದುವರೆಸಿದ್ದು ವಾಜಪೇಯಿ ಹಾಗೂ ಮೋದಿ ಸರ್ಕಾರ. ಒಳ ಮೀಸಲಾತಿ ಚಿಂತನೆ ಕೊಟ್ಟಿದ್ದೇ ಬಿಜೆಪಿ. ಅಂಬೇಡ್ಕರರ ಪಂಚಕ್ಷೇತ್ರ ಪುನರುಜ್ಜೀವನ ಮಾಡಿದ್ದು ಬಿಜೆಪಿ. ಅವರಿಗೆ ಭಾರತ ರತ್ನ ಕೊಟ್ಟಿದ್ದು ಕಾಂಗ್ರೆಸೇತರ ಸರ್ಕಾರ.
ದಲಿತರಿಗೆ ಒಳ್ಳೆಯದು ಮಾಡಿದ್ದು ಬಿಜೆಪಿ. ಹೀಗಿರುವಾಗ ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು. ಆದರೆ, ಈಗಿನ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲ ಎನಿಸುತ್ತದೆ. ಸಮಾಜ ವಿರೋಧಿ, ದೇಶ ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಪಾಕ್ ಪರ ಘೋಷಣೆ ಕೂಗಿದ ನಾಸೀರ್ ಹುಸೇನ್ ವಿಚಾರಣೆ ಆಗಲಿಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಕ್ರಮದ ಅಪೇಕ್ಷೆ ಮಾಡಲಾಗದು. ಆದರೆ, ಇಂತವರ ಮೇಲೆ ಕ್ರಮ ಆಗಬೇಕು ಎಂದು ಬೆಲ್ಲದ ಆಗ್ರಹಿಸಿದರು.