ರಾಮನಗರ

ಕಾಡಾನೆ ಹಾವಳಿ ತಡೆಗೆ 26 ಕಿ.ಮೀ. ರೈಲ್ವೆ ಬ್ಯಾರಿಕೇಡ್, 24 ಗಂಟೆ ಆನೆ ಎಚ್ಚರಿಕೆ ಸಂದೇಶ; ಈಶ್ವರ ಖಂಡ್ರೆ

ರಾಮನಗರ : ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ತತ್ ಕ್ಷಣವೇ 26 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 40 ಕೋಟಿ ರೂ. ಹಣ ಹಂಚಿಕೆ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಶಾಸಕರುಗಳಾದ ಸಿ.ಪಿ. ಯೋಗೇಶ್ವರ್, ಇಕ್ಬಾಲ್ ಹುಸೇನ್ ಅವರೊಂದಿಗೆ ಉನ್ನತಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆನೆಗಳು ನಾಡಿಗೆ ಬಂದು ಬೆಳೆಹಾನಿ, ಜೀವಹಾನಿ ಮಾಡುತ್ತಿದ್ದು, ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ತಾವು ಸಚಿವರಾದ ತರುವಾಯ ರಾಮನಗರ ಜಿಲ್ಲೆಗೆ ಒಟ್ಟು 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಿದ್ದು, ಈಗಾಗಲೇ 25 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

24ಗಂಟೆ ಎಚ್ಚರಿಕೆ ವ್ಯವಸ್ಥೆ:

ಜಿಲ್ಲೆಯಲ್ಲಿ ಆನೆ ಸಂಘರ್ಷ ಅತಿ ಹೆಚ್ಚು ಇರುವ ವಿಭಾಗ 85 ಇದ್ದರೆ, ಹೆಚ್ಚಿನ ಸಂಘರ್ಷ ಇರುವ 45 ವಿಭಾಗಗಳಿವೆ ಮತ್ತು ಮಧ್ಯಮ ಸಂಘರ್ಷದ 40 ವಿಭಾಗಗಳಿವೆ ಹೀಗಾಗಿ, ಆನೆಗಳು ಅರಣ್ಯದಿಂದ ಹೊರಗೆ ಬಂದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಈ ಬಗ್ಗೆ ವಾರದ ಏಳೂದಿನ, ದಿನದ 24 ಗಂಟೆ ಎಚ್ಚರಿಕೆ ಸಂದೇಶ ರವಾನಿಸಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳ ಸಿಬ್ಬಂದಿ, ಜನಪ್ರತಿನಿಧಿಗಳಿಗೆ ಈ ಸಂಬಂಧ ಮಾಹಿತಿ ರವಾನಿಸಲು ಮತ್ತು ಗ್ರಾಮಸ್ಥರಿಗೆ ವಾಟ್ಸ್ ಅಪ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಲು ಕ್ರಮ ವಹಿಸುವಂತೆ ಸೂಚಿಸಿದರು.

ಆನೆ ವಿಹಾರ ಧಾಮ:

ಭದ್ರಾ ಅಭಯಾರಣ್ಯದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ನಿರ್ಮಿಸುವುದಾಗಿ ಘೋಷಿಸಿರುವ ರೀತಿಯಲ್ಲೇ, ರಾಮನಗರ ಜಿಲ್ಲೆಯಲ್ಲಿ ಕೂಡ ಮುತ್ತತ್ತಿ ಅಥವಾ ನೇರಳಹಟ್ಟಿ ಬಳಿ ಆನೆ ವಿಹಾರ ಧಾಮ ಸ್ಥಾಪಿಸುವ ಮೂಲಕ ರಾತ್ರಿಯ ವೇಳೆ ನಾಡಿಗೆ ಬಂದು ಬೆಳೆ ತಿಂದು ರಾತ್ರಿ ಕಾಡಿಗೆ ಹೋಗುವ ಆನೆಗಳ ಹಾವಳಿ ತಪ್ಪಿಸಬೇಕು ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಈಶ್ವರ ಖಂಡ್ರೆ, ಈ ಸಂಬಂಧ ಪರಿಶೀಲಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ಕಾಡಿನಲ್ಲಿ ನೀರು, ಆಹಾರದ ಖಾತ್ರಿ:

ಅರಣ್ಯ ಪ್ರದೇಶದೊಳಗೆ ಆನೆ ಸೇರಿದಂತೆ ಎಲ್ಲ ವನ್ಯಜೀವಿಗಳಿಗೆ ಕುಡಿಯುವ ನೀರು ಮತ್ತು ಆಹಾರದ ಲಭ್ಯತೆಯ ಖಾತ್ರಿ ಪಡಿಸಲು ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು. ಬೇಸಿಗೆಯಲ್ಲಿ ಕಾವೇರಿ ವನ್ಯಜೀವಿ ಧಾಮ ಸೇರಿದಂತೆ ಜಿಲ್ಲೆಯ ಎಲ್ಲ ಅರಣ್ಯಗಳಲ್ಲಿರುವ ನೀರು ಗುಂಡಿಗಳಲ್ಲಿ ನೀರು ಇರುವಂತೆ ಕ್ರಮ ವಹಿಸಬೇಕು. ಅಗತ್ಯ ಇರುವ ಕಡೆ ಕೊಳವೆಬಾವಿಗಳಿಗೆ ಸೌರ ಪಂಪ್ ಸೆಟ್ ಅಳವಡಿಸಿ ನಿರಂತರವಾಗಿ ನೀರು ಹಾಯಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಕಾಡ್ಗಿಚ್ಚು ನಿಯಂತ್ರಣಕ್ಕೆ ಸೂಚನೆ:

ಬೇಸಿಗೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಹಾಗೂ ಬೆಂಕಿ ರೇಖೆ ನಿರ್ಮಿಸಲು ಕ್ರಮ ವಹಿಸುವಂತೆ ಹಾಗೂ ಅಗ್ನಿಶಾಮಕ ಸಲಕರಣಗಳ ಸನ್ನದ್ಧತೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಧಿಕಾರಿಗಳಿಗೆ ತರಾಟೆ:

ಜಿಲ್ಲೆಯಲ್ಲಿ ಎಷ್ಟು ಜಿಲ್ಲಾ ಮುಖ್ಯ ರಸ್ತೆ ಇದೆ, ಗ್ರಾಮೀಣ ರಸ್ತೆ ಇದೆ, ಇಲ್ಲಿ ಎಷ್ಟು ಗಿಡ ನೆಡಲಾಗಿದೆ ಎಂದು ಪ್ರಶ್ನಿಸಿದಾಗ ಉತ್ತರ ನೀಡದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡು, ಸಭೆಗೆ ಬರುವಾಗ ಮಾಹಿತಿಯೊಂದಿಗೆ ಬನ್ನಿ ಎಂದರು.

ನದಿ, ಕೆರೆ ಮಾಲಿನ್ಯ ನಿಯಂತ್ರಣಕ್ಕೆ ಸೂಚನೆ:

ಜಿಲ್ಲೆಯಲ್ಲಿ ಹರಿಯುವ ನದಿ, ಕೆರೆಗಳ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಸೂಚಿಸಿದ ಈಶ್ವರ ಬಿ ಖಂಡ್ರೆ, ಕೆರೆಗೆ ನೇರವಾಗಿ ತ್ಯಾಜ್ಯ ಹರಿದುಬಿಡುವ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಾಜಿ ಸಂಸತ್ ಸದಸ್ಯ ಡಿ.ಕೆ. ಸುರೇಶ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ಮುಖ್ಯ ವನ್ಯಜೀವಿ ಪರಿಪಾಲಕರಾದ ಸುಭಾಷ್ ಮಾಲ್ಕಡೆ, ಜಿಲ್ಲಾಧಿಕಾರಿ ಯಶವಂತ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Back to top button