ಕಾಲೇಜು ಕಟ್ಟಡ ನೆಲಸಮ ಮಾಡುವ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು.

ಮೈಸೂರು: ಶಿಥಿಲಾವ್ಯಸ್ಥೆಯಲ್ಲಿ ಇದ್ದ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ನೆಲಸಮ ಮಾಡುವ ಸಂದರ್ಭದಲ್ಲಿ ಮಣ್ಣಿನಡಿ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಮಹಾರಾಣಿ ವಿಜ್ಞಾನ ಕಾಲೇಜಿನ ಹಳೆಯ ಕಟ್ಟಡವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಏಕಾಎಕಿ ಮೇಲ್ಛಾವಣಿ ಹಾಗೂ ಗೋಡೆ ಕುಸಿದ ಪರಿಣಾಮ ಕಟ್ಟಡ ತೆರವು ಕಾರ್ಯಚರಣೆಗೆ ಬಂದಿದ್ದ ಕಾರ್ಮಿಕ ಮೃತಪಟ್ಟಿದ್ದಾನೆ.
ಗೌಸಿಯ ನಗರದ 32 ವರ್ಷದ ಸದ್ದಾಂ ಹುಸೇನ್ ಮಂಗಳವಾರ ಸಂಜೆ ಕಟ್ಟಡದ ಅಡಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದವರು ಸತತ 10 ಗಂಟೆಗಳ ಕಾರ್ಯಚರಣೆ ನಂತರ ಮಧ್ಯರಾತ್ರಿ 2 ಗಂಟೆಗೆ ಆತನ ಮೃತದೇಹವನ್ನು ಹೊರ ತೆಗೆದಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಆತನ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಅಣ್ಣ ಮನ್ಸೂರ್ ಖಾನ್ ಹೇಳಿದ್ದೇನು?:
ಕಳೆದ ಎರಡು ದಿನಗಳಿಂದ ಕಾಲೇಜು ಕಟ್ಟಡದ ಕೆಲಸಕ್ಕೆ ಹೋಗಿದ್ದ. ತಾರಸಿ ಕುಸಿದು ಅವಘಡ ಸಂಭವಿಸಿದೆ. ಇಡೀ ಕುಟುಂಬಕ್ಕೆ ಅವನೇ ಅಧಾರವಾಗಿದ್ದ. ಅವನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ.
ಸದ್ದಾಂ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ. ತುಂಬಾ ಬಡತನವಿದ್ದ ಕುಟುಂಬ. 1000 ರೂ. ಕೂಲಿಗೆ ಬಂದು ಪ್ರಾಣ ಕಳೆದುಕೊಂಡಿದ್ದಾನೆ. ಸರ್ಕಾರ 50 ಲಕ್ಷ ಪರಿಹಾರ ನೀಡಿ, ಅವನ ಹೆಂಡತಿಗೆ ಸರ್ಕಾರಿ ಕೆಲಸ ಕೊಟ್ಟು ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.