ಸಂಕ್ರಾಂತಿ ಹಬ್ಬಕ್ಕೆ “ಹೊಸ ಗಿಪ್ಟ್” ನೀಡಲಿರುವ ಕೆಎಂಎಫ್….! ರೈತರು ಪುಲ್ ಖುಷ್

ಬೆಂಗಳೂರು : ಸಂಕ್ರಾಂತಿ ಹಬ್ಬದ ನಂತರ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕೆಎಂಎಫ್ ನಿರ್ಧರಿಸಿದೆ. ಈ ಕುರಿತು ಇಂದು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಕೆಎಂಎಫ್ನ ಅಧ್ಯಕ್ಷ, ಮಾಜಿ ಶಾಸಕ ಭೀಮಾನಾಯಕ್, ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಳ ಮಾಡುವಂತೆ ರೈತರಿಂದ ಬೇಡಿಕೆ ಬಂದಿದೆ. ಹಾಗಾಗಿ, ಸಂಕ್ರಾಂತಿ ಹಬ್ಬದ ಬಳಿಕ ಈ ಸಂಬಂಧ ಸಭೆ ನಡೆಸಿ ದರ ಏರಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಹಾಲಿನ ದರ ಏರಿಕೆಗೆ ಬೇಡಿಕೆ ಬಂದಿದ್ದು, ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅಂತಿಮವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಹಾಲಿನ ದರ ಹೆಚ್ಚಳ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಇನ್ನೂ ದರ ಏರಿಕೆ ಬಗ್ಗೆ ನಿರ್ಧಾರವಾಗಿಲ್ಲ. ಸಂಕ್ರಾಂತಿ ಹಬ್ಬದ ನಂತರ ಮತ್ತೊಮ್ಮೆ ಸಭೆ ಸೇರಿ ನಿರ್ಧರಿಸಲಾಗುವುದು. ಈ ಹಿಂದೆ 50 ಎಂಎಲ್ ಹಾಲನ್ನು ನೀಡುವ ಮೂಲಕ ಲೀಟರ್ಗೆ 2 ರೂ. ಹೆಚ್ಚಳ ಮಾಡಲಾಗಿತ್ತು. ಹೆಚ್ಚುವರಿ ಹಾಲನ್ನು ವಾಪಸ್ ಪಡೆಯಲು ಉದ್ದೇಶಿಸಲಾಗಿದೆ. ಹಾಲಿನ ದರ ಹೆಚ್ಚಳ ಕುರಿತಂತೆ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚೆಯಾಗಿದ್ದು, ಹೆಚ್ಚಳ ಮಾಡುವಂತೆ ಪ್ರಸ್ತಾಪವೂ ಆಗಿದೆ ಎಂದು ಹೇಳಿದರು