ಬೆಂಗಳೂರು

ಬನ್ನೇರುಘಟ್ಟ ಪ್ರವಾಸಿಗರು, ಸ್ಥಳೀಯರಿಗೂ ಆಂಬ್ಯುಲೆನ್ಸ್ ಸೇವೆ: ಈಶ್ವರ ಖಂಡ್ರೆ

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದ ಗಾಂಧೀ ಪ್ರತಿಮೆ ಬಳಿ ಇಂದು ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಇಲಾಖೆಯ ಪರವಾಗಿ ಸ್ವೀಕರಿಸಿ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ತುರ್ತು ಆರೋಗ್ಯ ಸಂದರ್ಭದಲ್ಲಿ ಸ್ಥಳೀಯ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳಿಗೆ, ಉದ್ಯಾನದ ಸಿಬ್ಬಂದಿಗೆ ಮತ್ತು ಪ್ರವಾಸಿಗರಿಗೆ ಈ ಆಂಬ್ಯುಲೆನ್ಸ್ ನೆರವು ಲಭಿಸುವಂತಾಗಬೇಕು ಎಂದರು.

ಬನ್ನೇರುಘಟ್ಟ ಬೆಂಗಳೂರು ಬಳಿಯೇ ಇರುವ ದೊಡ್ಡ ಕಾನನ ಪ್ರದೇಶವಾಗಿದ್ದು, 1970ರಲ್ಲಿ ಉದ್ಯಾನ ಸ್ಥಾಪಿಸಲಾಯಿತು, 1974ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಯಿತು. ಪ್ರಸ್ತುತ ಇಲ್ಲಿ ಮೃಗಾಲಯ, ಚಿಟ್ಟೆ ಪಾರ್ಕ್, ಕರಡಿ ಸಫಾರಿ, ಹುಲಿ ಸಫಾರಿ, ಸಿಂಹ ಸಫಾರಿ ಇದ್ದು, ಇತ್ತೀಚೆಗೆ ತಾವೇ ಚಿರತೆ ಸಫಾರಿಯನ್ನೂ ಉದ್ಘಾಟಿಸಿದ್ದು, ಇದು ಪ್ರವಾಸಿಗರಿಗೆ ಜನಾಕರ್ಷಣೆ ಕೇಂದ್ರವಾಗಿದೆ ಎಂದರು.

ರಾಷ್ಟ್ರೀಯ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆ ತರಲು ಆಂಬ್ಯುಲೆನ್ಸ್ ವಾಹನದ ಅಗತ್ಯ ಮನಗಂಡು ಕಾವೇರಿ ಆಸ್ಪತ್ರೆಯವರು ಇಂದು ಒಂದು ಆಂಬ್ಯುಲೆನ್ಸ್ ಅನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿ ನೀಡಿದೆ ಎಂದು ಅಭಿನಂದಿಸಿದರು.

ಕಾವೇರಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ವಿಜಯಭಾಸ್ಕರನ್, ಉಪಾಧ್ಯಕ್ಷ ವಿಲ್ಫ್ರೆಡ್ ಸ್ಯಾಮ್ಸನ್ ಮತ್ತಿತರರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button