ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಫೈನಾನ್ಸ್ ಕಿರುಕುಳ ತಪ್ಪಿಸೋಕೆ ಆಗಲ್ಲ; ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಅದರಿಂದಾಗಿಯೇ ಕಿರುಕುಳ ಮತ್ತಷ್ಟು ಹೆಚ್ಚಳವಾಗಲಿದೆ. ಸರ್ಕಾರ ಕಾನೂನು ಮಾಡೋದ್ರಿಂದ ಮೈಕ್ರೋ ಫೈನಾನ್ಸ್ ಮೇಲೆ ನಿಗಾ ಮಾಡಲು ಆಗಲ್ಲ. ಬಡ, ಮಧ್ಯಮ ವರ್ಗದವರಿಗೆ ಸುಲಭವಾಗಿ ಸಾಲ ಸಿಗುವ ವ್ಯವಸ್ಥೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೆ ತರಬೇಕು ಎಂದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವಂತಾಗಬೇಕು. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಟ್ಟರೆ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಲೇವಾದೇವಿದಾರರ ಅಡ್ರೆಸ್ಸೇ ಇರಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಂಡಷ್ಟು ಬಡವರಿಗೆ ಸಾಲ ಸಿಗದಂತಾಗುತ್ತದೆ. ಬಡವರು ಬೀದಿಗೆ ಬಿದ್ದು, ಆತ್ಮಹತ್ಯೆಗಳು ಮತ್ತೆ ಹೆಚ್ಚಾಗುತ್ತೆ. ಸಾಲ ಸುಲುಭವಾಗಿ ಸಿಗುವಂತಹ ಪರ್ಯಾಯ ವ್ಯವಸ್ಥೆ ತರಬೇಕು. ಇರೋ ಕಾನೂನನ್ನೇ ಜಾರಿಗೆ ತಂದರೆ ಸಾಕು. ಪೊಲೀಸ್ ವ್ಯವಸ್ಥೆ ಮತ್ತು ಖಾಸಗಿ ಲೇವಾದೇವಿದಾರರ ನಡುವೆ ಒಳ ಒಪ್ಪಂದವಿದೆ. ಇದ್ದಂತಹ ಕಾನೂನಿನಲ್ಲಿ ಮನಿಲೆಂಡರ್ಸ್ ನ್ನು ಬಂಧಿಸಬಹುದು ಎಂದು ಅವರು ಸಲಹೆ ನೀಡಿದರು.
ಹತ್ತು ಸುಗ್ರೀವಾಜ್ಞೆ ಜಾರಿಗೆ ತಂದರೂ ಪ್ರಯೋಜನವಿಲ್ಲ. ಹಲವೆಡೆ ಆತ್ಮಹತ್ಯೆಗಳು ಮುಂದುವರೆದಿದೆ. ಸರ್ಕಾರ ಯಾವ ಅಧಿಕಾರಿ ಮೇಲೆ ಕ್ರಮ ಕೈಗೊಂಡಿದೆ..?ಮುಖ್ಯಮಂತ್ರಿ ಹೇಳಿದರು ಕಾನೂನು ಜಾರಿಗೆ ಬರ್ತಿಲ್ಲ. ಕಾನೂನು ಜಾರಿಗೆ ತರದ ಅಧಿಕಾರಿಗಳನ್ನು ಹೊಣೆ ಮಾಡಿ. ಒಬ್ಬ ಅಧಿಕಾರಿಯನ್ನಾದರೂ ಅಮಾನತ್ತು ಮಾಡಿ ಸಿಎಂ ಅವರದ್ದು ಖಡಕ್ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.