ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಸಿ ಲಕ್ಷ ,ಲಕ್ಷ ವಂಚನೆ..!

ಬೆಂಗಳೂರು: ನಗರದಲ್ಲಿ ವಾಸವಾಗಿರುವ ಜಪಾನ್ ಮೂಲದ ಪ್ರಜೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 35.49 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಜಪಾನ್ ಮೂಲದ 59 ವರ್ಷದ ವ್ಯಕ್ತಿ ನೀಡಿರುವ ದೂರಿನ ಅನ್ವಯ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರಿಗೆ ಡಿಸೆಂಬರ್ 12ರಂದು ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಪ್ರತಿನಿಧಿಗಳ ಹೆಸರಿನಲ್ಲಿ ಕರೆ ಮಾಡಿದ್ದ ವಂಚಕರು, ‘ನಂಬರ್ ಬ್ಲಾಕ್ ಮಾಡುತ್ತಿರುವುದಾಗಿ’ ತಿಳಿಸಿದ್ದರು. ನಂತರ ಮುಂಬೈ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿದ್ದ ಮತ್ತೋರ್ವ ವಂಚಕ, ‘ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ ಆದ್ದರಿಂದ ತನಿಖೆಯ ಕಾರಣದಿಂದ ಡಿಜಿಟಲ್ ಅರೆಸ್ಟ್ ಮಾಡುತ್ತಿರುವುದಾಗಿ ಬೆದರಿಸಿದ್ದರು. ನಂತರ ವಿಚಾರಣೆಯ ಸಲುವಾಗಿ ಬ್ಯಾಂಕ್ ಖಾತೆಯನ್ನ ಪರಿಶೀಲಿಸಬೇಕಿದೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಹಿಂದಿರುಗಿಸುತ್ತೇವೆ ಎಂದು ಡಿಸೆಂಬರ್ 12ರಿಂದ 14ರ ಅವಧಿಯೊಳಗೆ ಆರ್‌ಟಿಜಿಎಸ್, ಐಎಂಪಿಎಸ್ ಮೂಲಕ ಒಟ್ಟು 35.49 ಲಕ್ಷ ರೂ. ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ.
ಆದರೆ ಹಣ ಮರಳಿಸದಿದ್ದಾಗ ತಾವು ವಂಚನೆಗೊಳಗಾದ ಬಗ್ಗೆ ಅರಿತ ಜಪಾನ್ ಪ್ರಜೆ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿರುವುದಾಗಿ ತಿಳಿಸಿದರು.