ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆಗೆ ದಿನಗಣನೆ ಆರಂಭ.

ಮೈಸೂರು: ದಕ್ಷಿಣ ಕರ್ನಾಟಕದ ಹೆಸರಾಂತ ಸುತ್ತೂರು ಜಾತ್ರೆಗೆ ದಿನಗಣನೆ ಆರಂಭವಾಗಿದೆ. ವೈವಿಧ್ಯತೆಗಳಿಂದ ಕೂಡಿರುವ ಸುತ್ತೂರು ಜಾತ್ರೆ ಗ್ರಾಮೀಣ ಸೂಗಡಿನ ಅದ್ಧೂರಿ ಹಾಗೂ ಸಂಭ್ರಮದ ಜಾತ್ರೆಯಾಗಿದೆ. ಈ ಬಾರಿ ಜನವರಿ 26ರಂದ 31ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದೆ.
ಮೈಸೂರಿನ ನಂಜನಗೂಡು ಕಪಿಲಾ ನದಿತೀರದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಳೆ ಮೈಸೂರು ಭಾಗದಲ್ಲಿ ಶ್ರೀ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರತಿಯೊಬ್ಬರ ಮನೆ ಮಾತು. ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೇವಲ ಧಾರ್ಮಿಕ ಅಚರಣೆ ಅಷ್ಟೇ ಅಲ್ಲದೇ, ಆರೋಗ್ಯ ಮೇಳ, ಕೃಷಿ ಮೇಳ, ಉತ್ಪಾದಕ ಮತ್ತು ಗ್ರಾಹಕ ಮೇಳ, ಕ್ರೀಡಾ ಮೇಳ, ಸಾಂಸ್ಕ್ಕತಿಕ ಮೇಳ, ಶೈಕ್ಷಣಿಕ ಮೇಳ, ಸಾಹಿತ್ಯ ಮತ್ತು ಪುಸ್ತಕ ಮೇಳ, ಸರ್ವಧರ್ಮ ಸಮ್ಮಿಲನ, ಸಾಮೂಹಿಕ ವಿವಾಹ, ವಿವಿಧ ವಸ್ತು ಪ್ರದರ್ಶನಗಳು, ದನಗಳ ಜಾತ್ರೆ, ಜಾನಪದ ಜಾತ್ರೆ, ಕುಸ್ತಿ ಪಂದ್ಯಾವಳಿ, ನಗೆ ಉತ್ಸವ, ನಾಟಕ, ನೃತ್ಯ, ವಚನಗಾಯನ, ಸುಗಮ ಸಂಗೀತದಂತಹ ಎಲ್ಲ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ.