
ತುಮಕೂರು: 2028ರ ವಿಧಾನಸಭಾ ಚುನಾವಣೆಗೆ ನಾನು ಸ್ವರ್ಧೆ ಮಾಡಲ್ಲ. ವಿಪಕ್ಷದವರಿಗೆ ವಿರೋಧ ಮಾಡುವುದಕ್ಕೆ ಬೇರೆ ವಿಚಾರ ಇಲ್ಲ. ವಾಚ್ ಬಗ್ಗೆ, ಯಾರಾದರೂ ಊಟಕ್ಕೆ ಹೋದರೂ ಆರೋಪ ಮಾಡುತ್ತಾರೆ. ಅದರ ಬದಲು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಅಂತ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನನ್ನ ಪರವಾಗಿ ಹೋರಾಟ ಮಾಡುವವರಿಗೆ ನಾನು ಚಿರಋಣಿ. ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ, ಡಿ.ಕೆ.ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಮತ್ತೆ ಅದನ್ನೇ ಹೇಳುತ್ತೇನೆ. ಯಾರೆಲ್ಲಾ ನನ್ನ ಪರವಾಗಿ ಅಭಿಪ್ರಾಯ ಹಾಗೂ ವಿಶ್ವಾಸ ವ್ಯಕ್ತಪಡಿಸುತ್ತಾರೆಯೋ ಅವರಿಗೆ ಆಭಾರಿಯಾಗಿದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತ ಸಂಪೂರ್ಣ ಅಪೇಕ್ಷೆ ಪಡುವವನೂ ಅಲ್ಲ ಎಂದರು.

