ಬೆಂಗಳೂರು

ಮಾರ್ಚ್ ಮೂರರಿಂದ ಅಧಿವೇಶನ: ಮಾರ್ಚ್ 7 ರಂದು ಆಯವ್ಯಯ ಮಂಡನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವಿಧಾನಮಂಡಲದ ಅಧಿವೇಶನ ಮಾರ್ಚ್ 3, 2025 ರಿಂದ ಪ್ರಾರಂಭವಾಗಲಿದ್ದು, ನೂತನ ವರ್ಷದ ಮೊದಲನೇ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು, ಮಾರ್ಚ್ 7 ರಂದು, 2025-2026 ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಆಯವ್ಯಯದ ಮೇಲೆ ಚರ್ಚೆ ನಡೆದು ಉತ್ತರವನ್ನು ಮಾರ್ಚ್ ತಿಂಗಳ ಕೊನೆಯಲ್ಲಿ ನೀಡಲಾಗುವುದು. ಅಧಿವೇಶನ ಎಷ್ಟು ದಿನದವರೆಗೆ ನಡೆಸಬೇಕೆಂದು ವ್ಯವಹಾರ ಸಲಹಾ ಸಮಿತಿಯಲ್ಲಿ ತೀರ್ಮಾನ ಮಾಡಲಾಗುವುದು ಎಂದರು.

ಸರ್ಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ :

ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಇಂದು ರೈತ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ್ದು, ಅವರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸುವಾಗ ಇತಿಮಿತಿಯೊಳಗೆ ಸಲಹೆಗಳನ್ನು ಸೇರ್ಪಡೆ ಮಾಡಲಾಗುವುದು. ಕರ್ನಾಟಕ ಸರ್ಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾವತ್ತೂ ರೈತರ ಪರವಾಗಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಇರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬೆಲೆಯೇರಿಕೆ ತಗ್ಗಿಸಲು ಪ್ರಯತ್ನ : ಬೆಲೆಯೇರಿಕೆ ಹೆಚ್ಚಾಗಿರುವುದರಿಂದ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಮಾಡುತ್ತವೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಕುರಿತು ಹೆಚ್ಚಿನ ಒತ್ತು ನೀಡಬೇಕು. ರಾಜ್ಯ ಸರ್ಕಾರ ಬೆಲೆಯೇರಿಕೆ ತಗ್ಗಿಸಲು ಸಾಧ್ಯವಾದಷ್ಟೂ ಪ್ರಯತ್ನ ಮಾಡಲಿದೆ ಎಂದರು .

ಮೆಟ್ರೋ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ನೇಮಕ ಮಾಡಿರುವ ಸಮಿತಿ ಅಧ್ಯಕ್ಷರು :

ಮೆಟ್ರೋ ರೈಲಿನ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ನೇಮಕ ಮಾಡಿರುವ ಸಮಿತಿ. ಮೆಟ್ರೋ ಸ್ವಾಯತ್ತ ಸಂಸ್ಥೆಯಾದರೂ, ಸಮಿತಿಯಲ್ಲಿ ಇಬ್ಬರು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ಇಬ್ಬರು ರಾಜ್ಯ ಸರ್ಕಾರದ ಪ್ರತಿನಿಧಿಗಳಿರುತ್ತಾರೆ. ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ನೀಡುತ್ತದೆ. ಬೆಲೆ ನಿಗದಿ ಮಾಡುವುದು ಸಮಿತಿ. ಅಧ್ಯಕ್ಷರನ್ನು ನೇಮಕ ಮಾಡುವುದು ಕೇಂದ್ರ ಸರ್ಕಾರ. ಪ್ರಸ್ತುತ ತಮಿಳುನಾಡು ರಾಜ್ಯದ ನಿವೃತ್ತ ನ್ಯಾಯಾಧೀಶರು ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ : ಅನ್ನಭಾಗ್ಯ ಯೋಜನೆಯ ಮೊತ್ತ ಐದು ತಿಂಗಳಿನಿಂದ ಹಾಗೂ ಗೃಹಲಕ್ಷ್ಮೀ ಯೋಜನೆಯ ಮೊತ್ತ ಮೂರು ತಿಂಗಳಿನಿಂದ ಜಮಾ ಆಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಯಾವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಪಾವತಿ ಮಾಡೇ ಹೋಗಿದ್ದರೆ ಮಾಡುತ್ತೇವೆ . ಪಾವತಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಗೆ ಸಿದ್ಧ : ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ನಾವು ಸಿದ್ಧರಾಗಿದ್ದು, ಉಚ್ಛ ನ್ಯಾಯಾಲಯದ ಸೂಚನೆ ಮೇರೆಗೆ ಚುನಾವಣೆ ಮಾಡಲಾಗುವುದು ಎಂದರು.

ಜಲ್ ಜೀವನ್ ಮಿಷನ್  ಕೇಂದ್ರದ ಪಾಲು ಬಂದಿಲ್ಲ:  ಜಲ್ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗಳನ್ನು ನಮ್ಮ ವೇಗಕ್ಕೆ ಅನುಗುಣವಾಗಿ ಮಾಡುತ್ತಿಲ್ಲ. ಕೇಂದ್ರ ಸರ್ಕಾರದ ಪಾಲನ್ನು ಅವರು ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಲಾಗಿತ್ತು ಎಂದರು.

ನಾಯಕತ್ವ ಬದಲಾವಣೆ: ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಾ ಈ ಕುರಿತು ಪಕ್ಷದ ಹೈ ಕಮಾಂಡ್ ತೀರ್ಮಾನಿಸಲಿದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button