ಬೆಂಗಳೂರು

ರಾಜ್ಯದ ತಂಬಾಕು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರಕಾರ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದ ನಿಯೋಗ ಮಾಡಿದ್ದ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ನಿಖಿಲ್ ಅವರು; ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯಲಾಗಿರುವ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟಕ್ಕೆ ಅವಕಾಶ ನೀಡಿಕೆ ಹಾಗೂ ಆ ಬೆಳೆಗಾರರಿಗೆ ವಿಧಿಸಲಾಗುತ್ತಿದ್ದ ದಂಡ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಕೇಂದ್ರದ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅವರು; ಕಳೆದ 2024 ಡಿಸೆಂಬರ್ 2ರಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಡಿಸೆಂಬರ್ 21ರಂದು ವಾಣಿಜ್ಯ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಮಹತ್ವದ ಸಭೆಯನ್ನು ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

ಅಂದು ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವರಾದ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಟಿ.ಹರೀಶ್ ಗೌಡ ತಂಬಾಕು ಬೆಳೆಗಾರರು ಜತೆಯಲಿದ್ದರು ಎಂಬುದನ್ನು ನಿಖಿಲ್ ಅವರು ತಿಳಿಸಿದ್ದಾರೆ.

ಅಲ್ಲದೆ, ರಾಜ್ಯದ ತಂಬಾಕು ಬೆಳೆಗಾರ ರೈತರು ಕಳೆದ ವರ್ಷ ಮೇ, ಜುಲೈ ತಿಂಗಳಲ್ಲಿ ವಿಪರೀತ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದಲ್ಲಿ ಬೆಳೆಯಲಾಗುವ ಎಫ್‌ಸಿವಿ (flue-cured Virginia-FCV) ತಂಬಾಕು ಬೆಳೆಯ ಇಳುವರಿ ಗಣನೀಯವಾಗಿ ಕಡಿಮೆಯಾಗಿತ್ತು ಹಾಗೂ ತಂಬಾಕು ಎಲೆಗಳ ಗುಣಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ಹಾನಿಯಾಗಿತ್ತು. ಇದರಿಂದಾಗಿ ಬೆಳೆಗಾರರು ಭಾರೀ ನಷ್ಟಕ್ಕೆ ತುತ್ತಾಗಿದ್ದರು. ಕೇಂದ್ರ ಸರಕಾರ ಇದೀಗ ನೆರವಿಗೆ ಧಾವಿಸಿರುವ ಪರಿಣಾಮ ಸಾವಿರಾರು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರೈತಪರವಾದ ಅನೇಕ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದು, ಅದರಲ್ಲಿ ರಾಜ್ಯದ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವುದು ಕೂಡ ಒಂದಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರದ ಮೂಲಕ ತಂಬಾಕು ಮಂಡಳಿಯ ಹರಾಜು ಕೇಂದ್ರಗಳಲ್ಲಿ ನೋಂದಾಯಿತ ಬೆಳೆಗಾರರಿಂದ ಹೆಚ್ಚುವರಿ ತಂಬಾಕು ಮತ್ತು ನೋಂದಾಯಿಸದಿರುವ ಬೆಳೆಗಾರರಿಂದ ಅನಧಿಕೃತ ತಂಬಾಕು ಮಾರಾಟಕ್ಕೆ ಅನುಮತಿ ನೀಡಲಿದೆ. ಜತೆಗೆ, ಯಾವುದೇ ಹೆಚ್ಚುವರಿ ಸೇವಾ ಶುಲ್ಕಗಳಿಲ್ಲದೆ ಬೆಳೆಗಾರರು ನ್ಯಾಯಯುತವಾಗಿ ಮಾರುಕಟ್ಟೆ ಬೆಲೆಯನ್ನು ಪಾರದರ್ಶಕವಾಗಿ ಪಡೆಯಬಹುದಾಗಿದೆ ಎಂದು ನಿಖಿಲ್ ಅವರು ಮಾಹಿತಿ ನೀಡಿದ್ದಾರೆ.

ಎಫ್‌ಸಿವಿ ತಂಬಾಕನ್ನು 53,325 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 40,487 ನೋಂದಾಯಿತ ಹಾಗೂ 12,838 ಪರವಾನಗಿ ರಹಿತ ಬೆಳೆಗಾರರು ಬೆಳೆಯುತ್ತಿದ್ದಾರೆ. ಕೇಂದ್ರದ ನಿರ್ಧಾರದಿಂದಾಗಿ ಪ್ರಮುಖವಾಗಿ 12,838 ತಂಬಾಕು ಬೆಳೆಗಾರರಿಗೆ ಅನುಕೂಲವಾಗಲಿದೆ. ಕರ್ನಾಟಕದ ತಂಬಾಕು ಬೆಳೆಗಾರರ ಸಂಕಷ್ಟ ನಿವಾರಿಸಲು ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button