Uncategorized
ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ • ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ
ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ • ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ

ಹಿಪ್ಪರಗಿ ಬ್ಯಾರೇಜ್ ಮೂಲಕ ಹರಿದು ಹೋದ ಕೃಷ್ಣೆಯ 10 ಅಡಿ ನೀರು!!!
ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ
• ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ• ಸಮುದ್ರ ಪಾಲಾದ 10 ಅಡಿ ಕೃಷ್ಣಾ ನೀರು• ಬತ್ತಿ ಹೋಗುವ ಭೀತಿಯಲ್ಲಿ ಕೃಷ್ಣಾ ನದಿ• ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು, ಮೀನುಗಾರರ ಆಕ್ರೋಶ
ಕಾಗವಾಡ ತಾಲೂಕಿನ ಹಿಪ್ಪರಗಿ ಬ್ಯಾರೇಜ್ನ 22ನೇ ಗೇಟ್ ಕಳೆದ ಜನವರಿ 6ರಂದು ಮುರಿದು ಬಿದ್ದ ಪರಿಣಾಮ, ಕೇವಲ 48 ಗಂಟೆಗಳಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ಸುಮಾರು 10 ಅಡಿಗಳಷ್ಟು ಕುಸಿದಿದೆ. ನೀರಿನ ಸೋರಿಕೆ ನಿರಂತರವಾಗಿ ಮುಂದುವರಿದಿದ್ದು, ನದಿ ಸಂಪೂರ್ಣ ಬತ್ತಿ ಹೋಗುವ ಗಂಭೀರ ಸ್ಥಿತಿ ನಿರ್ಮಾಣವಾಗಿದೆ.
ತ್ವರಿತವಾಗಿ ಗೇಟ್ ರಿಪೇರಿಯಾಗದೇ ಹೋದಲ್ಲಿ, ಒಂದೇ ದಿನದಲ್ಲಿ ಕೃಷ್ಣಾ ನದಿ ಸಂಪೂರ್ಣ ಬತ್ತಿಹೋಗುವ ಆತಂಕ ಎದುರಾಗಿದೆ. ಸದ್ಯಕ್ಕೆ ೨ ಟಿಎಂಸಿ ನೀರು ಹರಿದು ಹೋಗಿದ್ದು, ಇದು ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತಾಲೂಕಿನ ಕೃಷ್ಣಾ ನದಿ ದಡದ ಕುಸನಾಳ, ಮೊಳವಾಡ, ಉಗಾರ ಬಿಕೆ, ಉಗಾರ ಖುರ್ದ, ಕೃಷ್ಣಾ ಕಿತ್ತೂರು, ಜುಗುಳ ಸೇರಿದಂತೆ ಶಿರಗುಪ್ಪಿ ಹಾಗೂ ಐನಾಪೂರ ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ಮತ್ತು ಸಾವಿರಾರು ಎಕರೆ ಬೆಳೆಗಳಿಗೆ ತೊಂದರೆ ಉಂಟಾಗಲಿದೆ.
೬ ರಂದು ಮಧ್ಯಾಹ್ನದಿಂದ ಇಂದು ಮಧ್ಯಾಹ್ನದವರೆಗೆ, ಅಂದರೆ ೪೮ ಗಂಟೆಗಳಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ ೧೦ ಅಡಿಗಳಷ್ಟು ಇಳಿಕೆಯಾಗಿದ್ದು, ನದಿ ತೀರದ ರೈತರನ್ನು ಮತ್ತು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದೆ. ಕೂಡಲೇ ಬ್ಯಾರೇಜ್ ಗೇಟ್ ರಿಪೇರಿಯಾಗದೇ ಹೋದಲ್ಲಿ ಜುಗೂಳ ಗ್ರಾಮದ ಬಳಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗುವ ಭೀತಿ ಇದೆ. ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಬ್ಯಾರೇಜ್ನ ರಿಪೇರಿ ಕಾರ್ಯ ಕೈಗೊಂಡು, ತಾಲೂಕಿನ ರೈತರನ್ನು ಮತ್ತು ಗ್ರಾಮಸ್ಥರನ್ನು ಕಾಪಾಡಬೇಕಾಗಿದೆ.
ಉಗಾರದ ಹತ್ತಿರ ಕೃಷ್ಣಾ ನದಿ ತೀರದಲ್ಲಿ ಎಲ್ಲ ಪಂಪ್ಸೆಟ್ಗಳನ್ನು ಮೇಲ್ಭಾಗಕ್ಕೆ ಅಳವಡಿಸಲಾಗಿತ್ತು. ಆದರೆ ನೀರು ದಿಢೀರನೆ ಇಳಿದಿದ್ದರಿಂದ, ರೈತರು ಪಂಪ್ಗಳನ್ನು ಮತ್ತೆ ಕೆಳಕ್ಕೆ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ನದಿ ಸಂಪೂರ್ಣವಾಗಿ ಬತ್ತಿ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ. ಉಗಾರ ಸಕ್ಕರೆ ಕಾರ್ಖಾನೆ ಬ್ಯಾರೇಜ್ ಮೇಲೆ ಮೊದಲು ೧೫ ಅಡಿ ನೀರಿತ್ತು, ಈಗ ಅದು ಸಂಪೂರ್ಣವಾಗಿ ಇಳಿಮುಖವಾಗಿದೆ. ಇಷ್ಟೆಲ್ಲಾ ಆತಂಕ ಸೃಷ್ಟಿಯಾದರೂ ಕೆಲವು ರೈತರು ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಎದುರಾಗಬಹುದಾದ ಗಂಭೀರ ಸ್ಥಿತಿಯ ಬಗ್ಗೆ ರೈತರಲ್ಲಿ ತೀವ್ರ ಚಿಂತೆ ವ್ಯಕ್ತವಾಗಿದೆ.
ಉಗಾರದ ಮೀನುಗಾರ ಬೊಬನ ಬಾಗಡಿ ತಮ್ಮ ಆತಂಕ ತೋಡಿಕೊಳ್ಳುತ್ತಾ, “ತುಂಬಿದ್ದ ಕೃಷ್ಣಾ ನದಿಯ ನೀರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ೧೦ ಅಡಿಗಳಷ್ಟು ಹರಿದು ಹೋಗಿದೆ. ಈ ನೀರನ್ನು ಮತ್ತೆ ನದಿಗೆ ಯಾರು ತುಂಬುತ್ತಾರೆ? ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಜನಪ್ರತಿನಿಧಿಗಳು ಇಂತಹ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಕೇವಲ ಎರಡೇ ದಿನಗಳಲ್ಲಿ ೧೦ ಅಡಿ ನೀರು ಸಮುದ್ರ ಪಾಲಾಗಿದೆ. ರೈತರು ತಮ್ಮ ಬೆಳೆಗಳಿಗೆ ನೀರು ಹರಿಸಲು ಈಗ ಏನು ಮಾಡಬೇಕು? ಇದು ಗಂಭೀರವಾದ ವಿಚಾರ. ನಾವು ಮೀನುಗಾರರು ನಿಂತ ನೀರಿನಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದೆವು, ಆದರೆ ಆಕಸ್ಮಿಕವಾಗಿ ನೀರು ವೇಗವಾಗಿ ಹರಿದು ಹೋಗಿದ್ದರಿಂದ ನಮ್ಮ ಬಲೆಗಳು ಹರಿದು ಹಾನಿಯಾಗಿವೆ,” ಎಂದು ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕೃಷ್ಣಾ ನದಿಯಲ್ಲಿ ಮತ್ತೆ ನೀರು ಸಂಗ್ರಹಿಸುವ ಬಗ್ಗೆ ಚಿಂತಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

