ಬೆಂಗಳೂರು

ಕಾಂಗ್ರೆಸ್ಸಿಗರಿಗೆ ಹಾಲು ಕುಡಿದು ಸಾಯುವ ಪರಿಸ್ಥಿತಿ ಬಂದಿದೆ; ಗೋವಿಂದ ಕಾರಜೋಳ

ಬೆಂಗಳೂರು: ಸತ್ತ ಪ್ರಾಣಿಯನ್ನು ತಿನ್ನಲು ರಣಹದ್ದುಗಳು ಕಚ್ಚಾಡಿದಂತೆ ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಿಎಂ ಗೆ ಅವಕಾಶ ನೀಡಲಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಅಧಿಕಾರಕ್ಕೆ ಬಂದು ಸಿದ್ಧರಾಮಯ್ಯನವರು ತಮ್ಮ ಭಂಡತನವನ್ನು ಬಿಟ್ಟು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಒಮ್ಮೆ ಸರಿಯಾಗಿ ನೋಡಬೇಕು. 5 ಗ್ಯಾರಂಟಿ ಯೋಜನೆಗಳನ್ನು ಕೂಡ ಸರಿಯಾಗಿ ನೀಡುತ್ತಿಲ್ಲ. ಪೊಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. 2024-2025 ರಲ್ಲಿ 3 ಲಕ್ಷ 70 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಆದರೇ ಇದರಲ್ಲಿ ಸಂಗ್ರಹವಾಗಿದ್ದು ಕೇವಲ 1 ಲಕ್ಷ 72 ಸಾವಿರ ಕೋಟಿ ಮಾತ್ರ ಸಂಗ್ರಹವಾಗಿದೆ. 64 ಸಾವಿರ ಕೋಟಿ ರೂಪಾಯಿ ಗುತ್ತಿಗೆದಾರರ ಬಿಲ್ ನೀಡಿಲ್ಲ. ಹಲವರು ಆತ್ಮಹತ್ಯೆ ಮಾಡಿಕೊಂಡರೇ 27 ಗುತ್ತಿಗೆದಾರರು ರಾಜ್ಯಪಾಲರಿಗೆ ದಯಾಮರಣ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರಕ್ಕೆ ಸೋತು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ಧರಾಮಯ್ಯನವರು ಎಲ್ಲ ರಂಗದಲ್ಲಿಯೂ ವಿಫಲರಾಗಿದ್ದಾರೆ. ಅಲ್ಲದೇ ಕೃಷ್ಣಾ ಮೇಲ್ದಂಡೆಯಂತಹ ಯೋಜನೆಗಳ ಸದುಪಯೋಗವಾಗುತ್ತಿಲ್ಲ. ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರವಾಗುತ್ತಿಲ್ಲ. ನಾಡಿನ ಅಭಿವೃದ್ಧಿಯ ಕಳಕಳಿ ಕಾಂಗ್ರೆಸ ಸರ್ಕಾರಕ್ಕಿಲ್ಲ. ಇಂದೇ ಚುನಾವಣೆ ನಡೆದರೇ ಕಾಂಗ್ರೆಸ್ಸಿಗೆ 20 ಸೀಟು ಕೂಡ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಸಿದ್ಧರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗೌರವಯುತವಾಗಿ ಸಿದ್ಧರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಧಿಕಾರಕ್ಕಾಗಿ ಸತ್ತ ಪ್ರಾಣಿಗಳನ್ನು ತಿನ್ನಲು ರಣಹದ್ದುಗಳು ಕಚ್ಚಾಡುವಂತೆ ಕಚ್ಚಾಡುತ್ತಿದ್ದಾರೆ. ಕೀಳುಮಟ್ಟದ ಟೀಕೆಯೊಂದಿಗೆ ನಾಲ್ಕು ಗುಂಪುಗಳಾಗಿ ಬಡೆದಾಡುತ್ತಿದ್ದಾರೆ ಎಂದರು. 

ದಿನ ಬೆಳಗಾದರೇ ದಲಿತ ಸಿಎಂ ಕುರಿತು ಚರ್ಚೆ ಜಾರಿಯಲ್ಲಿರುತ್ತದೆ. ಎಐಸಿಸಿ ಅಧ್ಯಕ್ಷರಾಗಿರುವ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹುಮತವಿದ್ದು, ದಲಿತರಿಗೆ ಸಿಎಂ ಸ್ಥಾನ ನೀಡಬೇಕು. ಯಾವುದೇ ದಲಿತ ಶಾಸಕರನ್ನು ಅಥವಾ ಸ್ವತಃ ತಾವೇ ಖರ್ಗೆ ಅವರು ಸಿಎಂ ಆಗಬೇಕು. ಒಂದು ಬಾರಿ ಕರ್ನಾಟಕದಲ್ಲಿ ದಲಿತ ಶಾಸಕರಿಗೆ ಮುಖ್ಯಮಂತ್ರಿಯಾಗಲೂ ಅವಕಾಶ ನೀಡಬೇಕು ಎಂದರು. 

ಇನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ಸಿನವರಿಗೆ ಹಾಲು ಕುಡಿದು ಸಾಯುವ ಪರಿಸ್ಥಿತಿ ಬಂದೊದಗಿದೆ. ಇನ್ನು ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯವನ್ನು ಹೈಕಮಾಂಡ್ ಸರಿಪಡಿಸಲಿದೆ. ಅಲ್ಲದೇ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಇರುವಾಗ ನೂತನ ಅಧ್ಯಕ್ಷರ ಆಯ್ಕೆಯ ಪ್ರಶ್ನೆಯೇ ಇಲ್ಲ. ಕಾಂಗ್ರೆಸನ್ನು ಎದುರಿಸಲು ಬಿಜೆಪಿ ಒಂದಾಗಿ ಕೆಲಸ ಮಾಡಲಿದೆ. 

Related Articles

Leave a Reply

Your email address will not be published. Required fields are marked *

Back to top button