
ಉದ್ಯಾನವನಗಳಲ್ಲಿ ಕೊಳವೆ ಬಾವಿಗಳ ಸ್ಥಿತಿ-ಗತಿ ಕುರಿತು ವರದಿ ನೀಡಿ: ತುಷಾರ್ ಗಿರಿ ನಾಥ್
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಕೊಳವೆಬಾವಿಗಳ ಸ್ಥಿತಿ-ಗತಿಯ ಕುರಿತು ವರದಿ ನೀಡಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯಾನವನಗಳ ಪೈಕಿ, ಎಷ್ಟು ಕೊಳವೆ ಬಾವಿಗಳು ಸುಸ್ಥಿತಿಯಲ್ಲಿವೆ, ಎಷ್ಟು ಕೊಳವೆ ಬಾವಿಗಳು ದುಸ್ಥಿತಿಯಲ್ಲಿವೆ ಎಂಬುದನ್ನು ಪರಿಶೀಲಿಸಿ ಶೀಘ್ರ ವರದಿ ನೀಡಲು ಸೂಚನೆ ನೀಡಿದರು.
ಕೊಳವೆ ಬಾವಿಗಳು ದುರಸ್ಥಿಯಲ್ಲಿರುವ ಉದ್ಯಾನವನಗಳಲ್ಲಿ ಕೂಡಲೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಈ ಸಂಬಂಧ ಜಲಮಂಡಳಿಯ ಜೊತೆ ಮಾತನಾಡಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿಸಿದ ನೀರನ್ನು ಟ್ಯಾಂಕರ್ ಗಳ ಮೂಲಕ ಉದ್ಯಾನವನಗಳಲ್ಲಿರುವ ಸಸಿ/ಮರಗಳಿಗೆ ವ್ಯವಸ್ಥೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಸಂಸ್ಕರಿಸಿದ ನೀರು ವ್ಯವಸ್ಥೆ ಮಾಡಿ:
ನಗರದಲ್ಲಿ ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಉದ್ಯಾನವನಗಳು, ಕೆರೆಗಳು, ಮೀಡಿಯನ್ಸ್ ಗಳಲ್ಲಿರುವ ಸಸಿ/ಮರಗಳಿಗೆ ನೀರು ಅವಶ್ಯಕತೆಯಿದೆ. ಈ ಸಂಬಂಧ ಕೂಡಲೆ ಎಷ್ಟು ನೀರಿನ ಅಗತ್ಯವಿದೆ, ಎಷ್ಟು ಟ್ಯಾಂಕರ್ ಗಳು ಬೇಕಿದೆ ಎಂಬುದನ್ನು ಪಟ್ಟಿ ಮಾಡಿ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಬಿದ್ದಿರುವ ಎಲೆಗಳನ್ನು ತೆರವುಗೊಳಿಸಿ ಹಾಗೂ 100 ಲೀವ್ಸ್ ಕಾಂಪೋಸ್ಟರ್ ಸ್ಥಾಪನೆ:
ನಗರದಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು, ಮರದ ಎಲೆಗಳು ಸಾಕಷ್ಟು ಬೀಳುತ್ತಿವೆ. ಎಲ್ಲೆಂದರಲ್ಲಿ ಒಣಗಿದ ಎಲೆಗಳ ರಾಶಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಿಗದಿತ ಸ್ಥಳಗಳನ್ನು ಗುರುತಿಸಿ ಎಲೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿ.ಎಸ್.ಡಬ್ಲ್ಯೂ.ಎಂ.ಎಲ್ ವತಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸ್ವಚ್ಛತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ 1280 ಉದ್ಯಾನವನಗಳು ಬರಲಿದ್ದು, ಈ ಪೈಕಿ 100 ಉದ್ಯಾನಗಳಲ್ಲಿ ಎಲೆ ಗೊಬ್ಬರ ತಯಾರಿಕಾ ಘಟಕ(ಲೀವ್ಸ್ ಕಾಂಪೋಸ್ಟರ್)ಗಳನ್ನು ಸ್ಥಾಪಿಸಲಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ಉದ್ಯಾನವನಗಳಲ್ಲಿ ಸಸಿ/ಮರಗಳಿಂದ ಬೀಳುವ ಎಲೆಗಳನ್ನು ಸ್ಥಳದಲ್ಲಿಯೇ ಗೊಬ್ಬರವನ್ನಾಗಿಸಿ ಅದನ್ನು ಉದ್ಯಾನವನಗಳಲ್ಲಿಯೇ ಬಳಸಿಕೊಳ್ಳುವಂತೆ ಮಾಡಲು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ಸತೀಶ್, ಅರ್ಚನಾ, ರಮ್ಯಾ, ಕರೀಗೌಡ, ಸ್ನೇಹಲ್, ರಮೇಶ್, ದಿಗ್ವಿಜಯ್ ಬೋಡ್ಕೆ, ಗಿರೀಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.