ಬಸ್’ಗೆ ಮಸಿ ಬಳಿಯುವ ಕೃತ್ಯಗಳನ್ನು ನಿಲ್ಲಿಸಿ ಬೆಳಗಾವಿ ಸೇರಿದಂತೆ ಕರ್ನಾಟಕ-ಮಹಾರಾಷ್ಟ್ರದ ಶಾಂತಿಯನ್ನು ಕಾಪಾಡಿ

ಬೆಳಗಾವಿ: ಕಲ್ಬುರ್ಗಿಯ ಕೆಲ ಸಂಘಟನೆಗಳು ಮಹಾರಾಷ್ಟ್ರದ ಬಸ್ಸಿಗೆ ಮಸಿ ಬಳಿದು ಶಾಂತವಾಗಿದ್ದು ಕರ್ನಾಟಕ ಮಹಾರಾಷ್ಟ್ರ ಭಾಷಾ ವಿವಾದವನ್ನು ಮತ್ತೇ ಹೆಕ್ಕಿ ತೆಗೆಯುತ್ತಿದ್ದು, ಅವರ ವಿರುದ್ಧ ಕ್ರಮಕೈಗೊಂಡು ಬೆಳಗಾವಿ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಶಾಂತಿಯನ್ನು ಭಂಗಗೊಳಿಸದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಯೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ.
ಸೋಮವಾರದಂದು ಮಹಾರಾಷ್ಟ್ರ ಏಕೀಕರಣ ಯುವಾ ಸಮಿತಿಯ ಪ್ರಮುಖರಾದ ಶುಭಂ ಶೇಳಕೆ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಏಕೀಕರಣ ಯುವಾ ಸಮಿತಿಯ ಪ್ರಮುಖರಾದ ಶುಭಂ ಶೇಳಕೆ ಬೆಳಗಾವಿಯಲ್ಲಿ ಕಂಡಕ್ಟರ್ ಹಲ್ಲೆ ಪ್ರಕರಣ ಶಾಂತವಾಗಿ ಕರ್ನಾಟಕ ಮಹಾರಾಷ್ಟ್ರ ಬಸ್ ಸೇವೆ ಆರಂಭಗೊಂಡಿತ್ತು, ಆದರೇ ಈಗ ಮತ್ತೇ ಕಲ್ಬುರ್ಗಿಯಲ್ಲಿ ಕನ್ನಡಪರ ಸಂಘಟನೆಗಳು ಮಹಾರಾಷ್ಟ್ರದ ಬಸ್ಸಿಗೆ ಕಪ್ಪು ಮಸಿ ಬಳಿದು ಮತ್ತೇ ಬೆಳಗಾವಿ ಸೇರಿದಂತೆ ಕರ್ನಾಟಕ ಮಹಾರಾಷ್ಟ್ರದಲ್ಲಿ ಶಾಂತಿಭಂಗಗೊಳಿಸಲು ಪ್ರಯತ್ನಿಸಿವೆ.
ಬಾಳೇಕುಂದ್ರಿ ಗ್ರಾಮದಲ್ಲಿ ನಡೆದ ಟೀಕೇಟ್ ವಿವಾದಕ್ಕೆ ಭಾಷೆಯ ವಿವಾದದ ಸ್ವರೂಪ ನೀಡಿ, ಎಂ.ಇ.ಎಸ್. ಮತ್ತು ಮರಾಠಿ ಭಾಷಿಕರನ್ನು ಅದರಲ್ಲಿ ಎಳೆದುಕೊಳ್ಳಲಾಗಿತ್ತು. ವಿವಾದವನ್ನು ಮುಗಿಸಿ, ಬೆಳಗಾವಿ ಜಿಲ್ಲಾಧಿಕಾರಿಗಳು ಕೊಲ್ಹಾಪುರದ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಗಿತಗೊಂಡಿದ್ದ, ಬಸ್ ಸೇವೆಯನ್ನು ಪುನರಾರಂಭಿಸಿದ್ದರು. ಈಗ ಮತ್ತೇ ವಿವಾದವನ್ನು ಹೆಕ್ಕಿ ತೆಗೆಯಲು ಪ್ರಯತ್ನಿಸುತ್ತಿರುವ ಕಲ್ಬುರ್ಗಿ ಸಂಘಟನೆಯವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇನ್ನು ಕರ್ನಾಟಕ್ ಬಂದ್’ಗೆ ಕರೆ ನೀಡಿದ ಬಗ್ಗೆ ಮಾತನಾಡಿದ ಅವರು ಯಾವ ಕಾರಣಕ್ಕಾಗಿ ಕರ್ನಾಟಕ ಬಂದ್’ ಮಾಡಿ ಸಂಪೂರ್ಣ ರಾಜ್ಯದ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಸಚಿವರುಗಳು ಮಧ್ಯಪ್ರವೇಶಿಸಿ ಎರಡು ರಾಜ್ಯದ ಶಾಂತಿಯನ್ನು ಕಾಯ್ದುಕೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರವು ಸಮನ್ವಯ ಸಮಿತಿಯನ್ನು ರಚಿಸಿ ಎರಡು ರಾಜ್ಯದ ಶಾಂತಿಯನ್ನು ಕಾಪಾಡಲು ಮುಂದಾಗಬೇಕು. ಪ್ರಚೋದನೆಗೆ ಪ್ರತಿಕ್ರಿಯೆ ಕೊಡುವವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳದೇ, ಪ್ರಚೋದಿಸುವವರ ವಿರುದ್ಧವು ಕೂಡ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ಧರು.