ಯಲ್ಪಾರಟ್ಟಿ ಅರಣ್ಯ ಸಿದ್ಧೇಶ್ವರ ಜಾತ್ರೆಯ ಭಂಡಾರದಲ್ಲಿ ಮಿಂದೆದ್ದ ಲಕ್ಷಾಂತರ ಭಕ್ತ ಸಮೂಹ.

ಕುಡಚಿ; ರಾಯಭಾಗ ತಾಲೂಕಿನ ಯಲ್ಪರಟ್ಟಿ ಗ್ರಾಮದ ತಾಲೂಕಿನ ಎರಡನೇಯ ಅತಿದೊಡ್ಡ ಜಾತ್ರೆ ಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಅತಿ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಕೊನೆಯ ದಿನದ ನಿಮಿತ್ಯ ದೇವರ ಮೇಲೆ ಭಂಡಾರ ತೂರಿ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ನಾಲ್ಕೂ ದಿಕ್ಕಿಗಳಿಂದ ಉಲ್ಕೆಗಳಂತೆ ಭಂಡಾರ ತೂರಿ ಬರುವ ದೃಶ್ಯ ನಯನಮನೋಹರವಾಗಿತ್ತು.
ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆ ಪ್ರಾರಂಭವಾದ ಮೊದಲ ದಿನದಿಂದ ದೇವರಿಗೆ ಭಕ್ತರು ಉರುಳು ಸೇವೆ ಸಲ್ಲಿಸುವುದು ವಾಡಿಕೆ ಅದರಂತೆ ನಾಲ್ಕನೇ ದಿನ ನೈವ್ಯದ್ಯ ಕೊನೆಯ ದಿನ ಸೋಮವಾರದಂದು ದೇವರಿಗೆ ನಿವಾಳಕೆ ಸಲ್ಲಿಸುವ ಹಾಗೂ ಕಂಬಳಿ ಮುಸಿಕಿನಲ್ಲಿ ದೇವರನುಡಿಯೊಂದಿಗೆ ಜಾತ್ರೆಯು
ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮೂಹ ಸುಮಾರು 5-6 ಟನ್ ಗೂ ಹೆಚ್ಚು ಭಂಡಾರವನ್ನು ತೂರಿದ್ದರಿಂದ ಯಲ್ಪರಟ್ಟಿ ಗ್ರಾಮದ ದೇವಸ್ಥಾನದ ಆವರಣ ಭಂಡಾರಮಯವಾಗಿತ್ತು.
ಭಂಡಾರವೋ? ಬಂಗಾರವೋ ಅನ್ನುವಂತೆ ಸೂರ್ಯ ಕಿರಣಗಳಿಗೆ ಹೊನ್ನು ಹೊಳೆದಂತೆ ಹೊಳೆಯುತ್ತಿತ್ತು. ಜಾತ್ರೆಯಲ್ಲಿ ಶುದ್ದ ಅರಿಸಿಣ ಪುಡಿಯನ್ನೇ ಮಾರಾಟ ಮಾಡಿ ಎಂದು ಜಾತ್ರಾ ಕಮಿಟಿಯು ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ಕಳಪೆ ಗುಣಮಟ್ಟದ, ರಾಸಾಯನಿಕ ಮಿಶ್ರಿತ ಭಂಡಾರ ಮಾರಾಟ ಮಾಡಿದ್ದಲ್ಲಿ ಮುಲಾಜಿಲ್ಲದೇ ಜಾತ್ರಾ ಕಮಿಟಿ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿತ್ತು. ಜಾತ್ರೆಯ ಸಂದರ್ಭದಲ್ಲಿ ಐದು ದಿನಗಳ ಕಾಲ ಜನರು ದೇವಸ್ಥಾನ ಸಮೀಪದ ಹೊಲ ಗದ್ದೆಗಳಲ್ಲಿಯೇ ವಸತಿ ಇದ್ದು, ಹೋಳಿಗೆ ಅಡುಗೆ ಮಾಡಿ ನೈವೇದ್ಯ ನಂತರ ಊಟ ಮಾಡುವ ರೂಢಿಯು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು ವಿಶೇಷತೆಗಳಲ್ಲೊಂದಾಗಿದೆ.
ನಿವ್ವಾಳಕಿಯ ನಿಮಿತ್ಯವಾಗಿ ದೇವಸ್ಥಾನದ ಹಿಂಬದಿಯಲ್ಲಿ ಪಲ್ಕಕ್ಕಿ ಆಗಮಿಸುತ್ತಿದ್ದಂತೆಯೇ ಜನ ತಾ ಮುಂದು ನಾ ಮುಂದು ಅಂತಾ ಮಹಿಳೆಯರು, ಮಕ್ಕಳು, ಯುವಕರು ಭಂಡಾರ, ಬಾಳೆ ಹಣ್ಣು, ಖಾರೀಕ ಹಾರಿಸಿದರು. ಜನ ಪಲ್ಲಕ್ಕಿ, ದೇವರ ಎತ್ತು, ದೇವರ ಕುದುರೆ, ದೇವರ ಪಲ್ಲಕ್ಕಿ ಬಂದಾಗಲೊಮ್ಮೆ ಭಂಡಾರ ತೂರಲಾಗತ್ತಿತ್ತು. ಹಳದಿ ಬಣ್ಣದ ಜಾತ್ರೆ ನಿವಾಳಿಕೆ ನುಡಿಗಳೊಂದಿಗೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.