
ಮಂಗಳೂರು/ಕಾರವಾರ: ಕಳೆದ ಒಂದು ತಿಂಗಳಿನಿಂದ ಸುಡು ಬಿಸಿಲಿನಿಂದ ಕಂಗಾಲಾಗಿದ್ದ ಕರಾವಳಿಯ ಜನರಿಗೆ ಬುಧವಾರ ರಾತ್ರಿ ಸುರಿದ ಬೇಸಿಗೆಯ ಮಳೆ ತಂಪಿನ ಅನುಭವ ನೀಡಿದೆ. ಮಳೆ ತಂಪು ಸಿಂಚನದಿಂದ ಜನರು ಖುಷಿ ಪಟ್ಟರು.
ಬುಧವಾರ ಸಂಜೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಕಡಬ ತಾಲೂಕಿನ ವಿವಿಧೆಡೆ ಮಳೆಯಾಗಿದೆ. ರಾತ್ರಿ ವೇಳೆಗೆ ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಾಣಿ, ಸುರತ್ಕಲ್, ಮೂಡಬಿದ್ರೆ, ಕಾರ್ಕಳ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ರಾತ್ರಿ ವೇಳೆಗೆ ಗುಡುಗು ಸಿಡಿಲಿನ ಅಬ್ಬರವು ಜೋರಾಗಿತ್ತು. ಇದರ ಪರಿಣಾಮ ಹಲವೆಡೆ ವಿದ್ಯುತ್ ವ್ಯತ್ಯಯವು ಉಂಟಾಗಿತ್ತು.
ಬೆಳ್ತಂಗಡಿಯಲ್ಲಿ ಆಲಿಕಲ್ಲು ಮಳೆ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಬುಧವಾರ ರಾತ್ರಿ ಆಲಿಕಲ್ಲು ಮಳೆ ಸುರಿದಿದೆ. ಉಜಿರೆ, ಕಕ್ಕಿಂಜೆ, ಚಾರ್ಮಾಡಿ ಭಾಗದಲ್ಲಿ ಸುರಿದ ಮಳೆಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿದೆ.
ವಿಮಾನಗಳು ಡೈವರ್ಟ್: ಭಾರೀ ಮಳೆಯ ಪರಿಣಾಮ ಮಂಗಳೂರಿನಲ್ಲಿ ಕಳೆದ ರಾತ್ರಿ ಇಳಿಯಬೇಕಿದ್ದ ಮೂರು ವಿಮಾನಗಳನ್ನು ಕೇರಳಕ್ಕೆ ಡೈವರ್ಟ್ ಮಾಡಲಾಗಿತ್ತು. ಹೈದರಾಬಾದ್ನ ಒಂದು ವಿಮಾನ ಮತ್ತು ಬೆಂಗಳೂರಿನ ಎರಡು ವಿಮಾನಗಳನ್ನು ಕೇರಳದ ಕಣ್ಣೂರಿಗೆ ಡೈವರ್ಟ್ ಮಾಡಲಾಯಿತು. ವಾತಾವರಣ ಸರಿಯಾದ ಬಳಿಕ ಮತ್ತೆ ಈ ವಿಮಾನಗಳು ಮಂಗಳೂರು ವಿಮಾನ ನಿಲ್ದಾಣ ತಲುಪಿವೆ.