ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ವಿಶೇಷ ಶ್ವಾನದಳ;ಜಿ.ಪರಮೇಶ್ವರ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯಾಹತವಾಗಿ ಸರಬರಾಜು ಆಗುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲು ಮೊದಲ ಬಾರಿಗೆ ವಿಶೇಷ ಶ್ವಾನದಳ ಸ್ಥಾಪಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯುವುದು ಹೊಸದೇನಲ್ಲ. ಒಂದಲ್ಲ ಒಂದು ರೀತಿ ನಿರಂತರ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಜೈಲು ವಾರ್ಡನ್ಗಳು ನಿರಂತರ ತಪಾಸಣೆ ನಡೆಸಿದರೂ ಅನಿರೀಕ್ಷಿತವಾಗಿ ಡ್ರಗ್ಸ್ ಸರಬರಾಜು ಆಗುತ್ತಿದೆ. ಸಿಬ್ಬಂದಿಗಳ ವಿರುದ್ಧ ಕರ್ತವ್ಯಲೋಪದ ಬಗ್ಗೆ ದೂರುಗಳು ಬಂದಿದ್ದರಿಂದ ಬಿಗಿ ತಪಾಸಣೆ ನಡೆಸುವ ಸಂಬಂಧ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್) ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಅದೇ ರೀತಿ ಜೈಲಿನಲ್ಲಿ ಮಾದಕ ವಸ್ತು ಪತ್ತೆ ಹಚ್ಚಲು ಬೆಲ್ಜಿಯಂ ತಳಿಯ ಎರಡು ಶ್ವಾನ ಖರೀದಿಸಿ ತರಬೇತಿ ನೀಡಿ ಶ್ವಾನದಳ ಸ್ಥಾಪಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಾರಾಗೃಹದಲ್ಲಿ ಬಂದಿಗಳು ಮೊಬೈಲ್ ಹಾಗೂ ನಿಷೇಧಿತ ವಸ್ತುಗಳನ್ನು ಬಳಸದಂತೆ ತಡೆಯಲು ರಾಜ್ಯದ ಕೇಂದ್ರ ಕಾರಾಗೃಹಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ಧಾರವಾಡ, ವಿಜಯಪುರ, ಕಲಬುರ್ಗಿ, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಈಗಾಗಲೇ ಕೆಎಸ್ಐಎಸ್ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು.
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಅತ್ಯಾಧುನಿಕ 280 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರದ ಕಾರಾಗೃಹ ಆಧುನೀಕರಣ ಯೋಜನೆಯಡಿ ಭದ್ರತೆ ಹಾಗೂ ತಪಾಸಣೆಗಾಗಿ 9 ಬ್ಯಾಗೇಜ್ ಸ್ಕ್ಯಾನರ್, 350 ವಾಕಿಟಾಕಿಗಳನ್ನು ಖರೀದಿಸಲಾಗಿದೆ. ಮೊಬೈಲ್ ಫೋನ್ ಬಳಕೆ ತಡೆಯಲು ಹೈರೆಸ್ಯೂಲೇಷನ್ ಹೊಂದಿರುವ 3 ಟವರ್ ಹಾಕಲಾಗಿದೆ. ಬೇರೆ ಕಾರಾಗೃಹಗಳಲ್ಲಿ 66 ಮೊಬೈಲ್ ಜಾಮರ್ಗಳನ್ನ ದುರಸ್ತಿ ಹಾಗೂ 2ಜಿಯಿಂದ 4/5 ಜಿಗೆ ಮೇಲ್ದಜೇಗೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.