ಬೆಳಗಾವಿ

ಹಾಳು ಕೊಂಪೆಯಾದ ಬೆಳಗಾವಿ “ನಗರವನ ಉದ್ಯಾನ”: ಪರಿಸರ ಪ್ರೇಮಿಗಳ ಅಸಮಾಧಾನ

ಬೆಳಗಾವಿ: ಬೆಳಗಾವಿ‌ ಹೊರವಲಯದಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡ, ಮಚ್ಚೆಯಲ್ಲಿ ನಗರವಾಸಿಗಳಿಗಾಗಿ ಅರಣ್ಯ ಇಲಾಖೆ ನಿರ್ಮಿಸಿದ್ದ ‘ನಗರವನ ಉದ್ಯಾನ’ (ಸಿಟಿ ಫಾರೆಸ್ಟ್‌ ಪಾರ್ಕ್‌) ನಿರ್ವಹಣೆ ಕೊರತೆಯಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಸುಮಾರು‌ 50 ಎಕರೆ ಪ್ರದೇಶದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ 2015-16ರಲ್ಲಿ ನಿರ್ಮಿಸಿದ ಉದ್ಯಾನ ಈಗ ಪಾಳುಬಿದ್ದಿದೆ. ಒಂದೆಡೆ ಉದ್ಯಾನಕ್ಕೆ ಪ್ರವೇಶ ನಿರ್ಬಂಧ ವಿಧಿಸಿರುವ ಫಲಕ ನೇತಾಡುತ್ತಿದ್ದರೆ, ಮತ್ತೊಂದೆಡೆ ಟಿಕೆಟ್‌ ಪಡೆದು ಪ್ರವೇಶಿಸಿ ಎಂಬ ಫಲಕವೂ ಇದೆ. ಪ್ರವೇಶ ನಿರ್ಬಂಧಿಸಿದ ಬಳಿಕವೂ ಇಲ್ಲಿ ದಿನವೂ ಹಲವಾರು ಪ್ರವಾಸಿಗರು ಬಂದು‌ ನಿರಾಸೆಯಿಂದ ತೆರಳುತ್ತಿರುವುದು ಸಾಮಾನ್ಯವಾಗಿದೆ.

ನಗರ ಮತ್ತು ಸುತ್ತಲಿನ ಜನರು ಪ್ರಕೃತಿಯ ಮಧ್ಯೆ ಬೆರೆತು, ಸ್ವಚ್ಛ ಗಾಳಿ ಆಸ್ವಾದಿಸಬೇಕು. ಪರಿಸರ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಿ ಈ ನಗರ ವನವನ್ನು ನಿರ್ಮಿಸಿದ್ದರು. ಇಲ್ಲಿ ಮಹಾಗನಿ, ಸೀಸಂ, ಶಿವನೆ, ಹೊನ್ನೆ, ತಾರೆ, ಶ್ರೀಗಂಧ, ದೇವದಾರು, ಮಾವು, ಹುಣಸೆ, ಪೇರು, ನೇರಳೆ, ಹಲಸು, ನಿಂಬೆ, ಧೂಪ, ಮುರುಗಲು, ದಾಲ್ಚಿನಿ, ವಾಟೆಹುಳಿ, ಬಿಲ್ವಪತ್ರೆ, ರಾಮಪತ್ರೆ, ಸುರಹೊನ್ನೆ, ಕರಿಮುತ್ತಲ, ಸಂಪಿಗೆ ಸೇರಿದಂತೆ 350ಕ್ಕೂ ಹೆಚ್ಚಿನ ಜಾತಿಯ ಗಿಡಗಳನ್ನು ಬೆಳೆಸಲಾಗಿತ್ತು. ಇಲಾಖೆ ಸಿಬ್ಬಂದಿ ಪರಿಶ್ರಮದಿಂದ ನೆಟ್ಟಿದ್ದ ಎಷ್ಟೋ ಸಸಿಗಳು ಬೆಳೆದು ದೊಡ್ಡ ಮರಗಳಾಗಿವೆ. ದಟ್ಟವಾದ ಹಸಿರು ವಾತಾವರಣವೂ ಇಲ್ಲಿದೆ. ಆದರೆ, ಇವುಗಳ ರಕ್ಷಣೆಗೆ ಮತ್ತು ನಿರ್ವಹಣೆಗೆ ಕ್ರಮ ವಹಿಸದೇ ಇರುವುದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ನಗರ ವನಕ್ಕೆ ಬರುವವರಿಗೆ ಟಿಕೆಟ್ ಕೌಂಟರ್ ಸ್ಥಾಪಿಸಲಾಗಿದೆ. ಒಳಗೆ ತಿಂಡಿ, ಚಹಾ, ಪಾನೀಯಕ್ಕೆ ಉಪಹಾರ ಗೃಹ ಕಟ್ಟಲಾಗಿದೆ. ಕುಡಿಯುವ ನೀರಿನ ಘಟಕ, ಶೌಚಾಲಯಗಳೂ ಇದ್ದವು. ಮಕ್ಕಳಿಗೆ ಆಟವಾಡಲು ಜಾರುಬಂಡೆ, ಜೋಕಾಲಿ, ಜಿಪ್ ಲೈನ್ ಸೇರಿದಂತೆ ಹಲವು ವಿಶಿಷ್ಟ ಸೌಕರ್ಯ ಒದಗಿಸಲಾಗಿದೆ. ವೃದ್ಧರು, ಪ್ರವಾಸಿಗರು ಕುಳಿತುಕೊಳ್ಳಲು ಆಸನಗಳನ್ನು ಮಾಡಲಾಗಿದೆ. ಯೋಗಾಸನ ಮಾಡುವವರಿಗೂ ಪ್ರತ್ಯೇಕ ಆವರಣವನ್ನು ಅಭಿವೃದ್ಧಿಪಡಿಸಲಾಗಿದೆ. ಮರ–ಗಿಡಗಳ ಬಗ್ಗೆ ತಿಳಿದುಕೊಳ್ಳಲು ಮಾಹಿತಿ ಒಳಗೊಂಡ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಅಂಥ ನಗರವನ ಈಗ ದಯನೀಯ ಸ್ಥಿತಿಯಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button