Uncategorized

ಬಾಗಲಕೋಟೆ ಜಿಲ್ಲೆಯಲ್ಲಿ 39 ಅಕ್ರಮ ಮರಳು ಅಡ್ಡೆಗಳು

ಬೆಂಗಳೂರು: ಬಾಗಲಕೋಟೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ವಿರುದ್ಧ ಲೋಕಾಯುಕ್ತರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿವೆ.
ಹುನಗುಂದ, ಇಳಕಲ್ಲ, ಬಾದಾಮಿ ಹಾಗೂ ಮುಧೋಳ ತಾಲೂಕುಗಳಲ್ಲಿನ ಒಟ್ಟು 41 ಮರಳು ಅಡ್ಡೆಯ ಮೇಲೆ ಲೋಕಾಯುಕ್ತ ತಂಡಗಳು ಇತ್ತೀಚೆಗೆ ದಿಢೀರ್ ದಾಳಿ ನಡೆಸಿದ್ದವು. ಈ ವೇಳೆ ಕೇವಲ 9 ಸ್ಥಳಗಳು ಮಾತ್ರ ಅಧಿಕೃತವಾಗಿದ್ದು, ಉಳಿದ 32 ಮರಳು ಅಡ್ಡೆಗಳು ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವುದು ತನಿಖೆ ವೇಳೆ ಬಯಲಾಗಿದೆ.
ದಾಳಿ ಸಮಯದಲ್ಲಿ 62 ಟಿಪ್ಪರ್‌ಗಳು, 2 ಟ್ರ್ಯಾಕ್ಟರ್‌ಗಳು, 24 ಹಿಟಾಚಿ ಮತ್ತು ಜೆಸಿಬಿ ಯಂತ್ರಗಳು, 15 ಬೋಟ್‌ಗಳು, ಪೈಪ್‌ಗಳು ಹಾಗೂ ಮರಳು ಸಾಗಿಸುವ ವಿವಿಧ ಉಪಕರಣಗಳು ಕಂಡು ಬಂದಿದ್ದವು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ 25 ಪ್ರಕರಣಗಳು ದಾಖಲಾಗಿವೆ.
ನದಿ ಪಾತ್ರಕ್ಕೆ ಹಾನಿ: ನದಿ ದಡಗಳು ಮತ್ತು ಕೃಷಿ ಜಮೀನುಗಳಲ್ಲಿ ನಿಯಮ ಬಾಹಿರವಾಗಿ, ಯಂತ್ರಗಳನ್ನು ಬಳಸಿ 15 ರಿಂದ 20 ಅಡಿಗಳಷ್ಟು ಆಳದಲ್ಲಿ ಮರಳು ತೆಗೆಯಲಾಗುತ್ತಿದೆ. ಇದರಿಂದ ನದಿ ಪಾತ್ರಕ್ಕೆ ಧಕ್ಕೆ ಉಂಟಾಗಿದ್ದು, ಸುತ್ತಮುತ್ತಲಿನ ಕೃಷಿ ಜಮೀನುಗಳ ಬೆಳೆ ನಾಶವಾಗಿದೆ. ಅಲ್ಲದೆ, ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ. ಈ ಅಕ್ರಮವನ್ನು ತಡೆಯುವಲ್ಲಿ ಜಿಲ್ಲಾ ಟಾಸ್ಕ್ ೆರ್ಸ್ ಸಂಪೂರ್ಣ ವಿಫಲವಾಗಿದೆ ಎಂದು ಲೋಕಾಯುಕ್ತರ ವರದಿ ತಿಳಿಸಿದೆ.
ಅಕ್ರಮಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್, ಕಂದಾಯ, ಅರಣ್ಯ ಮತ್ತು ಸಾರಿಗೆ ಇಲಾಖೆಗಳ ಸಮನ್ವಯದೊಂದಿಗೆ ಟಾಸ್ಕ್ ಫೋರ್ಸ್ ಬಲಪಡಿಸುವಂತೆ ಲೋಕಾಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜತೆಗೆ ಅಕ್ರಮ ಮರಳು ಸಾಗಾಟ ಮತ್ತು ಗಣಿಗಾರಿಕೆ ನಿಯಂತ್ರಿಸಲು ಹಲವು ಕಠಿಣ ಕ್ರಮಗಳನ್ನು ಅನುಸರಿಸುವಂತೆ ನಿರ್ದೇಶಿಸಿದ್ದಾರೆ.

ಮರಳು ಗಣಿಗಾರಿಕೆ ತಡೆಗೆ ಲೋಕಾ ಕ್ರಮಗಳು

  • ನದಿ ಪಾತ್ರಗಳಲ್ಲಿ ಹಾಗೂ ಸಾಗಾಟ ಮಾರ್ಗಗಳಲ್ಲಿ ಹಗಲು-ರಾತ್ರಿ ಗಸ್ತು ಹೆಚ್ಚಿಸುವುದು.
  • ಇ-ಟ್ರಾನ್ಸಿಟ್ ಪಾಸ್ ಪರಿಶೀಲನೆ ಕಡ್ಡಾಯ ಮತ್ತು ಅಕ್ರಮ ವಾಹನಗಳನ್ನು ಜಪ್ತಿ ಮಾಡುವುದು.
  • ಅಕ್ರಮ ನಡೆಯುವ ಸ್ಥಳಗಳಲ್ಲಿ ಸೌರಶಕ್ತಿ ಚಾಲಿತ ಸಿಸಿ ಕ್ಯಾಮರಾ ಅಳವಡಿಸಿ, ಲೈವ್ ಫುಟೇಜ್‌ಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಿಸಬೇಕು.
  • ಡ್ರೋನ್, ಜಿಪಿಎಸ್ ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ನಿಗಾ ವಹಿಸಬೇಕು, ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ದೂರು ಸ್ವೀಕರಿಸಲು ಟೋಲ್-ಫ್ರೀ ಸಂಖ್ಯೆ ರಚಿಸಬೇಕು

Related Articles

Leave a Reply

Your email address will not be published. Required fields are marked *

Back to top button