ಯತ್ನಾಳ್ ಉಚ್ಚಾಟನೆ ವಿಚಾರ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿಲ್ಲ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ

ಧಾರವಾಡ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಚಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಗೊತ್ತಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಉಚ್ಚಾಟನೆ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಚಾಟನೆ ಮಾಡುವಂತೆ ಮಾಡಿವೆ. ಯತ್ನಾಳ್ ಅವರೇ ಮುಂದೆ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕಾರಣದಿಂದ ಹೀಗೆ ಮಾಡಿದ್ದಾರೆ. ನಿಮ್ಮ ಕಾಲಿನ ಮೇಲೆ ನೀವೆ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡಿದ್ದೀರಿ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದವರೇ ಹೀಗೆ ಮಾಡಿರಬಹುದು. ಇದನ್ನು ಲಿಂಗಾಯತ ಪಂಚಮಸಾಲಿ ಸಮಾಜ ಖಂಡಿಸುತ್ತದೆ ಎಂದರು.
ಯತ್ನಾಳ್ ಮೀಸಲಾತಿ ಹೋರಾಟಕ್ಕೆ ಪಕ್ಷದ ಒಳಗೆ ಹಾಗೂ ಹೊರಗಡೆ ಇದ್ದು ಹೋರಾಟ ಮಾಡಿದ್ದಾರೆ. ಉಚ್ಚಾಟನೆಯಿಂದ ಅವರು ಧೃತಿಗೆಡುವ ಅವಶ್ಯಕತೆ ಇಲ್ಲ. ಇಡೀ ಪಂಚಮಸಾಲಿ ಸಮುದಾಯ ಅವರ ಜೊತೆಗೆ ಇದೆ. ಕೂಡಲೇ ಬಿಜೆಪಿ ನಾಯಕರು ಈ ಉಚ್ಚಾಟನೆಯನ್ನು ವಾಪಸ್ ಪಡೆಯಬೇಕು. ಹಿಂಪಡೆಯದೇ ಹೋದರೆ ಎಲ್ಲ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರ ಬನ್ನಿ ಎಂದು ಕರೆ ನೀಡಿದ ಅವರು, ಇದೇ ವಿಚಾರವಾಗಿ ನಾಳೆ (ಗುರುವಾರ) ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ತಿಳಿಸಲಾಗುವುದು ಎಂದರು.