ರಾಜ್ಯದಲ್ಲಿ ಕಾನೂನು – ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಪಾತ್ರ ಅಪಾರ; ಸಿಎಂ ಸಿದ್ಧರಾಮಯ್ಯ.

ಬೆಂಗಳೂರ: ಕಾನೂನು ಸುವ್ಯವಸ್ಥೆ, ಬಂಡವಾಳ ಹೂಡಿಕೆ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ನಡುವೆ ಒಂದಕ್ಕೊಂದು ನೇರ ಸಂಬಂಧವಿದೆ. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆ ಆಗುತ್ತಿದೆ. ಇದನ್ನು ನಿರ್ವಹಿಸಬೇಕಾದರೆ ಕಾನೂನು ಸುವ್ಯವಸ್ಥೆ, ಶಾಂತಿ ಪಾಲನೆ ಉತ್ತಮವಾಗಿರಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಕೋರಮಂಗಲದ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಡೆದ ಆಕರ್ಷಕ ಪರೇಡ್ ಎಲ್ಲರ ಗಮನ ಸೆಳೆಯಿತು. ನಂತರ ಸಿಎಂ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳ ಪದಕ ಪುರಸ್ಕೃತರಿಗೆ ಪದಕಗಳನ್ನು ಪ್ರದಾನ ಮಾಡಿದರು. ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು. ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಮುಖ್ಯಮಂತ್ರಿಗಳ ಪದಕವನ್ನು ಈ ಬಾರಿ ಒಟ್ಟಾಗಿ ವಿತರಿಸಿದ್ದೇವೆ, ಎಲ್ಲಾ ಪದಕ ಪುರಸ್ಕೃತರಿಗೂ ಅಭಿನಂದನೆಗಳು ಎಂದು ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದರು.
ತಂತ್ರಜ್ಞಾನದ ಬೆಳವಣಿಗೆಯಿಂದ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ಚುತ್ತಿವೆ.
ಅದೇ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಸೈಬರ್ ಅಪರಾಧಗಳನ್ನು ನಿಗ್ರಹಿಸಬೇಕಿದೆ. ಮಾದಕ ವಸ್ತು ಮುಕ್ತ ರಾಜ್ಯ ಮಾಡುವುದು ನನ್ನ ಗುರಿ. ಇದಕ್ಕಾಗಿ ಬಹಳಷ್ಟು ಶ್ರಮಿಸಬೇಕು. ಪೊಲೀಸರು ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತಾಕಲು ಪಣ ತೊಡಬೇಕು ಎಂದು ಅವರು ಕರೆ ನೀಡಿದರು.
ಇಲಾಖೆಯ ಶಿಸ್ತನ್ನು ಕಾಪಾಡಿ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಶಂಸನೀಯ ಸೇವೆಯನ್ನು ಸಲ್ಲಿಸಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಹುತಾತ್ಮರಾದ ಪೊಲೀಸರನ್ನು ಅವರು ಸ್ಮರಿಸಿದರು. ರಾಜ್ಯದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಯಾವುದೇ ರೀತಿಯ ಶಾಂತಿಭಂಗವಾಗದಂತೆ ಪೊಲೀಸರು ಸೇವೆ ಸಲ್ಲಿಸಿದ್ದಾರೆ. ಸರಾಷ್ಟ್ರಮಟ್ಟದಲ್ಲಿಯೂ ಕರ್ನಾಟಕ ಪೊಲೀಸ್ ಕೀರ್ತಿಯನ್ನು ಗಳಿಸಿದೆ.ಇಲಾಖೆಯನ್ನು ಅಧುನಿಕಕರಣಗೊಳಿಸಿ ಬಲವರ್ಧನೆಗೊಳಿಸುವ ಮೂಲಕ ಪೊಲೀಸ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಮಂಜೂರು ಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.