
ಬೆಂಗಳೂರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ (ಡಿಸಿಸಿ) ನಕಲಿ ಚಿನ್ನಾಭರಣ ಅಡವಿಟ್ಟು 62 ಕೋಟಿ ರೂ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್‌ನ ಹಾಲಿ ಅಧ್ಯಕ್ಷ ಮಂಜುನಾಥ ಗೌಡ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿ, 14 ದಿನಗಳವರೆಗೆ ವಶಕ್ಕೆ ಪಡೆದಿದೆ.
2014ರಲ್ಲಿ ಮಂಜುನಾಥ ಗೌಡ ಅವರು ಬ್ಯಾಂಕ್‌ನ ಅಧ್ಯಕ್ಷರಾಗಿದ್ದಾಗ ಈ ಅಕ್ರಮ ಬೆಳಕಿಗೆ ಬಂದಿತ್ತು. ಆಗ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ಮಂಜುನಾಥ ಗೌಡ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆರ್ಥಿಕ ಅಪರಾಧ ಹಿನ್ನೆಲೆಯಲ್ಲಿ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆಗೆ ಕೋರ್ಟ್ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ತೆರವಾದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಮಂಜುನಾಥಗೌಡ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿ ಗೃಹಕ್ಕೆ ಸೋಮವಾರ ಸಂಜೆ ಮಂಜುನಾಥ್ ಗೌಡ ಬಂದಿದ್ದಾಗ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದು, ಮಂಗಳವಾರ ಬಂಧಿಸಿದ್ದರು.