Uncategorized

 ಸ್ಮೃತಿ ಭವನಕ್ಕೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹಾಕುತ್ತಿದ್ದಂತೆ , ಮಹಾರಾಷ್ಟ್ರದಿಂದ ಮತ್ತೊಂದು ಕ್ಯಾತೆ ಶುರು

ಬೆಳಗಾವಿ: ಸ್ಮೃತಿ ಭವನಕ್ಕೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹಾಕುತ್ತಿದ್ದಂತೆ ಮಹಾರಾಷ್ಟ್ರ ಮತ್ತೊಂದು ಕ್ಯಾತೆ ಶುರು ಮಾಡಿದೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ರಾಜ್ಯದಲ್ಲಿರುವ ಸುಮಾರು 865ಕ್ಕೂ ಹೆಚ್ಚು ಗ್ರಾಮಗಳ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಶುಲ್ಕ ವಿನಾಯಿತಿ, ಉಚಿತ ಹಾಸ್ಟೆಲ್ ಸೌಲಭ್ಯದ ಆಫರ್ ನೀಡಿದೆ. ಈ ವಿಚಾರವಾಗಿ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1986ರಲ್ಲಿ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಗೋಲಿಬಾರ್​ನಲ್ಲಿ ಮೃತಪಟ್ಟ ಮರಾಠಿ ಭಾಷಿಕರ ಸ್ಮರಣೆಗಾಗಿ ಎಂಇಎಸ್ ಮುಖಂಡರು ಮಹಾರಾಷ್ಟ್ರ ಸರ್ಕಾರದ ನೆರವಿನಿಂದ ಬೆಳಗಾವಿಯ ಹಿಂಡಲಗಾದಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದ್ದರು. ಅಲ್ಲದೇ, ಭೂಮಿಪೂಜೆಯನ್ನೂ ನೆರವೇರಿಸಿದ್ದರು.

ಈ ಸಂಗತಿ ತಿಳಿಯುತ್ತಿದ್ದಂತೆಯೇ ಕನ್ನಡಪರ ಹೋರಾಟಗಾರರು, ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಸ್ಮೃತಿ ಭವನಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಒತ್ತಾಯಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾಡಳಿತ ಸ್ಮೃತಿ ಭವನ ನಿರ್ಮಾಣಕ್ಕೆ ಕಡಿವಾಣ ಹಾಕಿದೆ.

ಆದರೆ, ಈ ವಿಚಾರ ತಣ್ಣಗಾಯಿತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ ಕೊಲ್ಹಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾಲಯದ ಮೂಲಕ ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳನ್ನು ಸೆಳೆಯಲು ತಂತ್ರ ರೂಪಿಸಿದೆ. ಜೊತೆಗೆ, ಈ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿಯೇ ಬೆಳಗಾವಿಯ ಮೂರು ಕಡೆಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಏ.22ರಂದು ಏಕಕಾಲದಲ್ಲಿ ಈ ಕಾರ್ಯಾಗಾರಗಳು ನಡೆಯಲಿವೆ. ಈ ಬಗ್ಗೆ ಕೆಲ ಮರಾಠಿ ಪತ್ರಿಕೆಗಳಲ್ಲಿ‌ ಜಾಹೀರಾತನ್ನು ಪ್ರಕಟಿಸಲಾಗಿದೆ. ಶಿವಾಜಿ ವಿಶ್ವವಿದ್ಯಾಲಯದ ಈ ನಡೆಯಿಂದಾಗಿ ಕನ್ನಡ ಪರ ಸಂಘಟನೆಗಳು ಅಸಮಾಧಾನಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button