ಘಾಸಿಗೊಂಡವನು ಗಾಯಗೊಳಿಸುತ್ತಿದ್ದಾನೆ.. ತಾನೇನು ಎಂಬುದನ್ನು ತೋರಿಸಲು ನಿಂತವರು ಎದ್ದು ಬಂದು ಎದೆಗೇ ಒದೆಯುತ್ತಿದ್ದಾನೆ..!

ಘಾಸಿಗೊಂಡವನು ಗಾಯಗೊಳಿಸುತ್ತಿದ್ದಾನೆ.. ತಾನೇನು ಎಂಬುದನ್ನು ತೋರಿಸಲು ನಿಂತವರು ಎದ್ದು ಬಂದು ಎದೆಗೇ ಒದೆಯುತ್ತಿದ್ದಾನೆ..!
ಹೌದು.. ಮೊಹಮ್ಮದ್ ಸಿರಾಜ್ ಹೊಸ ಚೆಂಡಿನಲ್ಲಿ ಅದ್ಭುತ ಬೌಲರ್. ಚೆಂಡು ಸ್ವಲ್ಪ ಸ್ವಿಂಗ್ ಆಗುವ ಅಖಾಡ ಸಿಕ್ಕರೆ ಸಾಕು, ಸಿರಾಜ್ ಸುನಾಮಿಯಾಗಿ ಬಿಡುತ್ತಾನೆ. ಹಾಗಂತ ಹಳೆ ಚೆಂಡಿನಲ್ಲಿ ಕಳಪೆಯೇನಲ್ಲ. ಅಲ್ಲಿ ಹೊಸ ಚೆಂಡಿನಷ್ಟು ಪರಿಣಾಮಕಾರಿ ಅಲ್ಲದೇ ಇರಬಹುದು. ಆದರೆ ತಂಡದಿಂದಲೇ ಕಿತ್ತೊಗೆಯುವಷ್ಟು ಕಳಪೆ ಬೌಲರ್ ಅಲ್ಲವೇ ಅಲ್ಲ.
ಹೊರಗಿನ ಮಾತುಗಳು ಬೇರೆ. ಆದರೆ ‘ನಿನ್ನಲ್ಲಿ ಸಾಮರ್ಥ್ಯವಿಲ್ಲ, ನೀನು ಪರಿಣಾಮಕಾರಿಯಲ್ಲ’ ಎಂಬ ಮಾತು ತಂಡದೊಳಗಿನಿಂದಲೇ ಕೇಳಿಸಿದರೆ..? ಅದೂ ನಾಯಕನಿಂದ..! ಯಾವ ಕ್ರಿಕೆಟಿಗನೂ ಅದನ್ನು ಸಹಿಸಿಕೊಳ್ಳಲಾರ.
ಅಂದ ಹಾಗೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಸಿರಾಜ್’ನನ್ನು ಹೊರಗಿಡಲು ಕಾರಣ ಸ್ಪಷ್ಟ. ಕೋಚ್ ಗೌತಮ್ ಗಂಭೀರ್ ಶಿಷ್ಯ ಹರ್ಷಿತ್ ರಾಣಾನನ್ನು ಆಡಿಸಬೇಕಿತ್ತು. ಅದಕ್ಕಾಗಿ ಸಿರಾಜ್’ನನ್ನು ಬಲಿ ಕೊಡಲಾಯಿತು.. ಇಷ್ಟೇ ಇದರ ಹಿಂದಿನ ಮರ್ಮ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಕೈ ತಪ್ಪಿದ್ದು, ಅದಕ್ಕೆ ನೀಡಿದ ಕಾರಣ.. ಎಲ್ಲವೂ ಮೊಹಮ್ಮದ್ ಸಿರಾಜ್’ನನ್ನು ಘಾಸಿಗೊಳಿಸಿತ್ತು. ತಾನೇನು ಎಂಬುದನ್ನು ಇವರಿಗೆ ತೋರಿಸಲೇಬೇಕೆಂದು ಎದ್ದು ನಿಂತವನು, ಕಳೆದ ಮೂರು ಐಪಿಎಲ್ ಪಂದ್ಯಗಳಲ್ಲಿ 9 ವಿಕೆಟ್ ಉಡಾಯಿಸಿದ್ದಾನೆ.
ಹೈದರಾಬಾದ್’ನ ಆಟೋ ಡ್ರೈವರ್ ಮಗ ಇವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮತ್ತು ವಿರಾಟ್ ಕೊಹ್ಲಿ.
ಏಳು ವರ್ಷಗಳ ಹಿಂದೆ ಮೊಹಮ್ಮದ್ ಸಿರಾಜ್ ಆರ್.ಸಿ.ಬಿ ಪಾಳೆಯಕ್ಕೆ ಕಾಲಿಟ್ಟಾಗ ಕ್ರಿಕೆಟ್ ಜಗತ್ತಿಗೆ ಅಪರಿಚಿತ. ಅವನ ಸಾಮರ್ಥ್ಯವನ್ನು ಗುರುತಿಸಿ ಬೆನ್ನು ತಟ್ಟಿದವನು ಆಗಿನ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ. ‘’ನಾನು ಜೀವನಪೂರ್ತಿ ವಿರಾಟ್ ಕೊಹ್ಲಿಗೆ ಋಣಿಯಾಗಿರುತ್ತೇನೆ’’ ಎಂದು ಸಿರಾಜ್ ಹೇಳುತ್ತಿರುತ್ತಾನೆ. ಆ ಋಣಕ್ಕೆ ಕಾರಣವೂ ಇದೆ.
ಆರ್.ಸಿ.ಬಿ ಪರ ಆಡುತ್ತಿದ್ದ ಆರಂಭದ ದಿನಗಳಲ್ಲಿ ಸಿರಾಜ್ ಬೌಲಿಂಗ್’ನಲ್ಲಿ ಅಂತಹ ಸತ್ವವೇನೂ ಇರಲಿಲ್ಲ. ವಿಕೆಟ್ ಪಡೆಯುತ್ತಿದ್ದ ನಿಜ. ಆದರೆ ಹಿಗ್ಗಾಮುಗ್ಗ ದಂಡಿಸಿಕೊಳ್ಳುತ್ತಿದ್ದ. ಸಿರಾಜ್ ಕಾರಣಕ್ಕೆ ಕೆಲವೊಮ್ಮೆ ಗೆಲ್ಲುವ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಸೋತದ್ದೂ ಇದೆ. ಆಗೆಲ್ಲಾ ಸಿರಾಜ್ ಆರ್.ಸಿ.ಬಿ ಅಭಿಮಾನಿಗಳ ಕಣ್ಣಿಗೆ ಖಳನಾಯಕನಾಗಿ ಕಾಣುತ್ತಿದ್ದ. ಆದರೆ ನಾಯಕನಿಗೆ ಮಾತ್ರ ಹೈದರಾಬಾದ್ ಹುಡುಗನ ಮೇಲೆ ಎಲ್ಲಿಲ್ಲದ ನಂಬಿಕೆ. ಬೆನ್ನು ತಟ್ಟಿದರೆ ಈತ ತಂಡಕ್ಕೆ ಆಸ್ತಿಯಾಗಬಲ್ಲನೆಂಬ ವಿಶ್ವಾಸ.
ವಿರಾಟ್ ಕೊಹ್ಲಿಯ ಆ ವಿಶ್ವಾಸ, ನಂಬಿಕೆಯನ್ನು ಮೊಹಮ್ಮದ್ ಸಿರಾಜ್ ಉಳಿಸಿಕೊಂಡು ಬಿಟ್ಟ. ಕಳೆದ 3-4 ವರ್ಷಗಳಲ್ಲಿ ಆರ್.ಸಿ.ಬಿ ಪರ ಸ್ಥಿರ ಪ್ರದರ್ಶನ ತೋರಿದ ಬೌಲರ್ ಯಾರಾದರೂ ಇದ್ದರೆ ಅದು ಸಿರಾಜ್.
ಮೊಹಮ್ಮದ್ ಸಿರಾಜನಿಗೆ ಕ್ರಿಕೆಟ್ ಜೀವನ ಪಾಠ ಹೇಳಿ ಕೊಟ್ಟಿದೆ. ಪಾಠ ಕಲಿತಿರುವ ಸಿರಾಜ್ ತನ್ನನ್ನು ಕಡೆಗಣಿಸಿದವರಿಗೂ, ಅವಮಾನಿಸಿದವರಿಗೂ ಪಾಠ ಕಲಿಸುತ್ತಿದ್ದಾನೆ.
-ಸುದರ್ಶನ್
#siraj #ipl2025 #ipl #MohammedSiraj #rcb