ತುರ್ತು ಕರೆಗೆ ಸದಾ ಸ್ಪಂದಿಸುವ ಅಗ್ನಿ ಶಾಮಕ ಠಾಣೆ ಸಿಬ್ಬಂದಿಗಳ ಕರ್ತವ್ಯ ಶ್ಲಾಘನೀಯ: ದೊಡ್ಡಯ್ಯ ಹುತಾತ್ಮರಿಗೆ ಗಣ್ಯರಿಂದ ಪುಷ್ಪ ನಮನ

ತುರ್ತು ಕರೆಗೆ ಸದಾ ಸ್ಪಂದಿಸುವ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ರಕ್ಷಣಾ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ದೊಡ್ಡಯ್ಯ ಪ್ರಶಂಸಿಸಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯೂ ನಗರದ ಹೊರವಲಯದಲ್ಲಿರುವ ಅಗ್ನಿಶಾಮಕ ಠಾಣೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಅಗ್ನಿಶಾಮಕ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಪುಷ್ಪಗಚ್ಛ ನಮನ ಸಲ್ಲಿಸಿ ಅವರು ಮಾತನಾಡಿದರು.
ಪ್ರಸ್ತುತ ಏನೇ ಅವಘಢ ಸಂಭವಿಸಿದರೂ ಮೊದಲಿಗೆ ಅಗ್ನಿಶಾಮಕ ಠಾಣೆಗೆ ಕರೆ ಬರುತ್ತವೆ. ಏಕೆಂದರೆ ಯಾವುದೇ ಸಂದರ್ಭದಲ್ಲೂ ಕರೆ ಮಾಡಿದರೂ ತುರ್ತು ಪರಿಸ್ಥಿಗೆ ಸ್ಪಂದಿಸುವ ಏಕೈಕ ಇಲಾಖೆ ಅಗ್ನಿಶಾಮಕ ಠಾಣೆ ಎಂಬ ಮನೋಭಾವ ಜನರ ಮನಸ್ಸಿನಲ್ಲಿ ಮೂಡಿದೆ ಎಂದರು.
ಬೆಂಕಿ ಅವಘಡಗಳು, ಪ್ರವಾಹ ಪರಿಸ್ಥಿತಿ, ಉಂಟಾದಾಗಲೆಲ್ಲ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸುತ್ತಾರೆ. ಹಾಗಾಗಿ ಜನರಿಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ಮೇಲೆ ಅದಮ್ಯ ನಂಬಿಕೆ ಹಾಗೂ ವಿಶ್ವಾಸ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಕೆಲವೇ ಕೆಲವು ಅಗ್ನಿಶಾಮಕ ಠಾಣೆಗಳಿದ್ದವು. ಆದರೀಗ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ತೆರೆಯಲಾಗಿದ್ದು, ಸರ್ಕಾರ ತಾಂತ್ರಿಕ ಹಾಗೂ ಸುಸಜ್ಜಿತ ವಾಹನಗಳನ್ನು ಇಲಾಖೆಗೆ ನೀಡಿದೆ. ಇದರಿಂದ ಅನಾಹುತ ಸಂಭವಿಸಿದಾಗ ತುರ್ತು ಕರೆಗೆ ಸ್ಪಂದಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣಾ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ಇಲಾಖೆ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಶಂಸಿಸಿದರು.
ಈ ಹಿಂದೆ ಇಲಾಖೆಯನ್ನು ಫೈರ್ ಬ್ರಿಗೇಡ್ ಎಂದು ಕರೆಯಲಾಗುತ್ತಿತ್ತು, ನಂತರದಲ್ಲಿ ಅಗ್ನಿಶಾಮಕ ಠಾಣೆ ಎಂದಾಯಿತ್ತು. ಇದೀಗ ಅಗ್ನಿಶಾಮಕ ಮತ್ತು ತುರ್ತು ಸೇವೆ ಎಂದು ಗುರುತಿಸಿಕೊಂಡಿದೆ. ತುರ್ತು ಸಂದರ್ಭದಲ್ಲಿ ನಡೆಯುವ ಅನಾಹುತಗಳಿಗೆ ಸ್ಪಂದಿಸುವ ಇಂತಹ ಇಲಾಖೆಗೆ ಸರ್ಕಾರ ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದರು.
ಹುತಾತ್ಮರ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮ ಮಾಡುವುದು ಉತ್ತಮ ಕೆಲಸ ಎಂದ ಅವರು, ಇದರಿಂದ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ. ಕುಟುಂಬ ವರ್ಗದವರಿಗೂ ಆತ್ಮಸ್ಥೈರ್ಯ ತುಂಬಿದತಾಗುತ್ತದೆ ಎಂದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇAದ್ರ ಪ್ರಾಸ್ತಾವಿಕವಾಗಿ ಮಾತನಾಡಿ, 1944 ಏಪ್ರಿಲ್ 14 ರಂದು ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಎಸ್‌ಎಸ್ ಪೋರ್ಟ್ ಸ್ಟೈಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಬೆಂಕಿ ನಂದಿಸಲು ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದಾಗ ಹಡಗು ಸ್ಫೋಟಗೊಂಡು 66 ಫೈರ್ ಬ್ರಿಗೇಡನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವೀರ ಮರಣ ಹೊಂದಿದ್ದರು. ಈ ಹುತಾತ್ಮರ ನೆನಪಿಗಾಗಿ ಅಂದಿನಿಂದಲೇ ಏಪ್ರಿಲ್.14 ರಂದು ಪ್ರತಿ ವರ್ಷ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
1995 ರಲ್ಲಿ ಭಾರತದ ಅಂಚೆ ಇಲಾಖೆಯವರು ಇದರ ನೆನಪಿಗಾಗಿ ಅಂಚೆ ಚೀಟಿ (ಸ್ಟ್ಯಾಂಪ್) ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಹೋರಡಿಸಿರುವ “ಅಗ್ನಿ ಸುರಕ್ಷತ ಭಾರತವನ್ನು ಹುಟ್ಟುಹಾಕಲು ಒಂದಾಗೋಣ ಎಲ್ಲರೂ ಶ್ರಮಿಸೋಣ” ಎಂಬ ವೇದವಾಕ್ಯ ದಡಿಯಲ್ಲಿ ಈ ಒಂದು ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಅಂದಿನಿಂದ ಪ್ರತಿ ವರ್ಷ ಏಪ್ರಿಲ್ 14 ರಿಂದ 20 ರವರೆಗಿನ ಸಪ್ತಾಹವನ್ನು ದೇಶದಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳುವಳಿಕೆ ನೀಡಿ, ಅಗ್ನಿ ಶಮನದ ಬಗ್ಗೆ ಅಣಕು ಪ್ರದರ್ಶನಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಜಾಗೃತರಾಗಬೇಕೆಂದು ಹೇಳಿದರು.
ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಬಲಿದಾನಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿಕೊಂಡು ಬರಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗಣ್ಯರು ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾಧ್ಯಕ್ಷ ಜಿ.ಪಿ. ಭಕ್ತವತ್ಸಲ ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ನಿವೃತ್ತ ಅಗ್ನಿಶಾಮಕ ಠಾಣಾಧಿಕಾರಿ ಶಿವಲಿಂಗಯ್ಯ, ನಿವೃತ್ತ ಅಗ್ನಿಶಾಮಕಾಧಿಕಾರಿಗಳಾದ ಪುಟ್ಟಸೋಮರಾಧ್ಯ, ಬೊಮ್ಮಯ್ಯ ರಾಘವೇಂದ್ರ, ಪ್ರಮುಖ ಅಗ್ನಿಶಾಮಕರು ಪ್ರಭಕಾರ್ ಶೆಟ್ಟಿ, ಹಾಜರಿದ್ದರು.