ರಾಯಚೂರು
ರಸ್ತೆ ಬದಿಯ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ , ಭೀಕರ ಅಪಘಾತ, ನಾಲ್ವರು ಸ್ಥಳದಲ್ಲೇ ದುರ್ಮರಣ

ರಾಯಚೂರು: ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಬಳಿ ನಡೆದಿದೆ. ಅಪಘಾತದಲ್ಲಿ ನಾಗರಾಜ್(28), ಸೋಮು(38), ನಾಗಭೂಷಣ್(36) ಹಾಗೂ ಮುರಳಿ(38) ಮೃತಪಟ್ಟಿದ್ದಾರೆ. ಮೃತ ನಾಲ್ವರು ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ಗುರುತಿಸಲಾಗಿದೆ. ದೇವದುರ್ಗ ತಾಲೂಕಿನ ಗಬ್ಬೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತೆಲಂಗಾಣದ ಹಿಂದೂಪುರದಿಂದ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ನಡೆಯುವ ಕುರಿ ಸಂತೆಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಹಿನ್ನಲೆ ನಿಯಂತ್ರಣ ತಪ್ಪಿ ಹಳ್ಳದ ತಡೆಗೋಡೆಗೆ ಗೂಡ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಆನಂದ್ಗೆ ಗಂಭೀರ ಗಾಯವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.