ಪೋಲಿಯೋ ಹನಿ ಹಾಕಿದ ಎರಡು ತಿಂಗಳ ಮಗು ಸಾವು!

ಅಥಣಿ: ಪೋಲಿಯೋ ಹನಿ ಹಾಕಿದ ಎರಡು ತಿಂಗಳ ಮಗು ಸಾವನ್ನಪ್ಪಿದ ಆರೋಪ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬರಮಕುಡಿ ಗ್ರಾಮದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಬರಮಕುಡಿ ಗ್ರಾಮದ ಅನ್ನಪ್ಪ ದುಂಡಪ್ಪ ಬೇವನೂರ( 2) ಸಾವನ್ನಪ್ಪಿದ ಮಗುವಾಗಿದೆ. ವೈದ್ಯರು ನಿರ್ಲಕ್ಷ್ಯವೇ ಮಗು ಸಾವಿಗೆ ಕಾರಣ ಎಂದು ಕುಟುಂಬಸ್ಥರ ಕಣ್ಣೀರು ಹಾಕಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಎರಡು ತಿಂಗಳ ಹಸುಗೂಸು ಬಳಲುತ್ತಿತ್ತು. ಮಗುವಿನ ಹೃದಯಲ್ಲಿ ಹೋಲು ಇದ್ದರೂ ಎರಡು ಹನಿ ಪೊಲೀಯೋ, ಮೂರು ಇಂಜೆಕ್ಷನ್ ನೀಡಿದ್ದಾರೆ. ಇದರಿಂದಾಗಿ ತಡರಾತ್ರಿ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮಗು ಸತತವಾಗಿ ಆಳುತ್ತಲೇ ಇತ್ತು.
ನಂತರ ವೈದ್ಯರು ಕೊಟ್ಟ ಮಾತ್ರೆಗಳನ್ನು ಕುಟುಂಬಸ್ಥರು ಮಗುವಿಗೆ ನೀಡಿದ್ದಾರೆ. ಇನ್ನು ಸತತವಾಗಿ ಮೂರು ಇಂಜೆಕ್ಷನ್ ನೀಡುತ್ತಿರುವಾಗ ರಕ್ತ ಬಂದಿದೆ. ಕೈಯಿಂದ ಒತ್ತು ಹಿಡಿದರೂ ಕೂಡ ರಕ್ತ ನಿಲ್ಲಲಿಲ್ಲ. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗು ಸಾವನ್ನಪ್ಪಿದೆ ಎಂದು ಮೃತ ಮಗುವಿನ ತಂದೆ ದುಂಡಪ್ಪ ಮಾಧ್ಯಮಗಳಿಗೆ ಮಾಹಿತಿಯನ್ನ ನೀಡಿದ್ದಾರೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.