
ಬೆಳಗಾವಿ: ರಾಜ್ಯ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಇಲಾಖೆಯಾದ ಬೆಳಗಾವಿ ಸ್ಪೋರ್ಟ್ಸ್ ಹೋಟೆಲ್’ನ ಮಹತ್ವಾಕಾಂಕ್ಷಿ ಕುಸ್ತಿಪಟು ಸ್ವಾತಿ ಪಾಟೀಲ್,ರಾಜಸ್ಥಾನದ ಕೋಟಾದಲ್ಲಿ ನಡೆದ 20 ವರ್ಷದೊಳಗಿನ ಬಾಲಕಿಯರ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ಬೆಳಗಾವಿ ರೈಲು ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಕಡೋಲಿಯ ಮೂಲದ ಸ್ವಾತಿ ಪಾಟೀಲ್ ಬೆಳಗಾವಿಯ ಬಿ.ಕೆ. ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾಳೆ. ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ ಬಾಲಕಿಯರ ವಿಭಾಗದಲ್ಲಿ ಸ್ವಾತಿ 57 ಕೆಜಿ ತೂಕ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾಳೆ.
ಸ್ವಾತಿ ಕುಸ್ತಿ ತರಬೇತುದಾರ ಸ್ಮಿತಾ ಪಾಟೀಲ್ ಮತ್ತು ತರಬೇತುದಾರ ಮಂಜುನಾಥ ಮಾದರ್ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದಾಳೆ. ರೈಲು ನಿಲ್ದಾಣಕ್ಕೆ ಆಗಮಿಸಿದ ಸ್ವಾತಿ ಪಾಟೀಲ್’ ಅವರನ್ನು ಕುಟುಂಬಸ್ಥರು, ಕ್ರೀಡಾ ಪ್ರೇಮಿಗಳು ವಿಜೃಂಭಣೆಯಿಂದ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಸ್ವಾತಿ ಪಾಟೀಲ್, ಪ್ರತಿಬಾರಿಯೂ ರಾಷ್ಟ್ರಮಟ್ಟದ ವರೆಗೂ ಹೋಗಿ ಗೆಲುವು ಸಾಧಿಸಲಾಗುತ್ತಿರಲಿಲ್ಲ. ಆದರೇ, ಈ ಬಾರಿ ತರಬೇತುದಾರರ ಕಠಿಣ ತರಬೇತಿ ಯಶಸ್ಸನ್ನು ತಂದು ಕೊಟ್ಟಿದೆ. ರಾಜಸ್ಥಾನದ ಕೋಟಾದಲ್ಲಿ ನಡೆದ ಉಪಾಂತ್ಯ ಸುತ್ತಿನಲ್ಲಿ 6-2 ಅಂತರದಿಂದ ಗೆಲುವುವನ್ನು ಸಾಧಿಸಲಾಗಿದೆ. ಅಂತಿಮ ಸುತ್ತನ್ನು 2 ಪಾಯಿಂಟ್’ನಿಂದ ಗೆಲ್ಲಲಾಗಿದೆ ಎಂದರು.
ಈ ವೇಳೆ ಮಾತನಾಡಿದ ತರಬೇತುದಾರ ಸ್ಮಿತಾ ಪಾಟೀಲ್ ಅವರು ಇಡಿ ಕರ್ನಾಟಕದಲ್ಲಿ ಮಹಿಳಾ ತರಬೇತುದಾರರಾಗಿ ಬೆಳಗಾವಿಯಲ್ಲಿ ಸುಮಾರು 20 ಜನರಿಗೆ ಪ್ರಶಿಕ್ಷಣ ನೀಡಲಾಗುತ್ತಿದೆ. ಯುವತಿಯರಿಗೆ ಸರ್ಕಾರಿ ಯೋಜನೆಯಡಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಕಾಮನ್’ವೆಲ್ತ್, ಏಷ್ಯನ್ ಗೇಮ್ಸ್, ವರ್ಡ್ ಚಾಂಪಿಯನ್’ಶಿಪ್, ಓಲಂಪಿಕ್’ನಲ್ಲಿ ಬೆಳಗಾವಿಯ ಯುವತಿಯರು ಭಾಗವಹಿಸುವಂತಾಗಬೇಕು. ಪಾಲಕರು ಕೂಡ ತಮ್ಮ ಮಕ್ಕಳಿಗೆ ಸಹಯೋಗವನ್ನು ನೀಡಬೇಕು. ಸ್ವಾತಿಯ ಈ ಸಾಧನೆಗೆ ಅವಳ ಕಠಿಣ ಪರಿಶ್ರಮವೇ ಕಾರಣ ಎಂದರು.