ಪಾಪಿ ಪಾಕಿಸ್ತಾನ ನಿನಗೆ ಶೂರತ್ವ, ವೀರತ್ವ ವಿದ್ದರೆ ನಮ್ಮ ಸೈನಿಕರ ಜೊತೆಗೆ ಹೋರಾಡಿ: ಉಗ್ರರಿಗೆ ಪಂಥಾಹ್ವಾನ ನೀಡಿದ ವಿಜಯಪುರ ವಿದ್ಯಾರ್ಥಿಗಳು.

ಪ್ರವಾಸಿಗರ ಸ್ವರ್ಗ ಎಂದೆ ಕರೆಯಲ್ಪಡುವ ಜಮ್ಮು ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ದಾಳಿಗೆ 26 ಪ್ರವಾಸಿಗರು ಬಲಿಯಾಗಿದ್ದಾರೆ. ಇಡೀ ದೇಶದಲ್ಲಿ ಉಗ್ರರ ವಿರುದ್ಧ ಜನಾಕ್ರೋಶ ಮಡುಗಟ್ಟಿದೆ. ಅದರಲ್ಲೂ ಯುವಜನತೆಯಲ್ಲಿ ಪಾಪಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೆಚ್ಚಿದೆ. ರಾಷ್ಟ್ರದಲ್ಲಿ ಇದೀಗ ಈ ಘಟನೆ ಸಾವಿಗೀಡಾದವರು ನಮ್ಮವರು ಎಂಬ ಭಾವನೆ ಮೂಡಿಸಹತ್ತಿದೆ.ಇತ್ತ ಪುಟಾಣಿ ಮಕ್ಕಳು ವಿದ್ಯಾರ್ಥಿಗಳು ಕೂಡಾ ಸಾವಿಗೀಡಾದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಟಾಣಿ ವೀರರ ಕೊರತೆ ಏನಿರಲಿಲ್ಲಾ. ಭಾರತೀಯರ ರಕ್ತಗುಣದಲ್ಲೇ ದೇಶಭಕ್ತಿ ಎಂಬುದು ಮೂಡಿಬಂದಿರುತ್ತದೆ. ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ನರಮೇಧ ಇಡೀ ದೇಶವನ್ನೇ ಬಡಿದೆಬ್ಬಿಸಿದೆ. ಪೆಹಲ್ಗಾಮ್ ನಲ್ಲಿ ಪೈಶಾಚಿಕ ದಾಳಿಗೆ ಬಲಿಯಾದ 26 ಜನರಿಗೆ ಇಡಿ ದೇಶ ಮಮ್ಮಲ ಮರುಗುತ್ತಿದೆ. ಇತ್ತ ವಿಜಯಪುರ ನಗರದ ಶಾಂತಿನಿಕೇತನ ಸಿಬಿಎಸ್‌ಈ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶ್ರದ್ಧಾಂಜಲಿ ಅರ್ಪಿಸಿದರು. ಮೃತಪಟ್ಟ 26 ಜನರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮೊಂಬತ್ತಿ ಕೈಯಲ್ಲಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದರು. ಭಾರತೀಯ ಸೇನೆಯ ಉಡುಪು ಧರಿಸಿದ್ದ ಪುಟಾಣಿಗಳು ಅಮಾಯಕರ ಸಾವಿಗೆ ಕಂಬನಿ ಮಿಡಿದು ದೇಶ ಅಂತಾ ಬಂದಾಗ ನಾವು ಕೂಡಾ ಸೈನಿಕರೇ ಎಂಬ ಸಂದೇಶ ರವಾನಿಸಿ ದೇಶಭಕ್ತಿ ಮೆರೆದರು. ಭಾರತ ಮಾತಾ ಕಿ ಜೈ, ವೀರ ಜವಾನ್ ಎಂದು ಜೈಕಾರ ಮೊಳಗಿಸಿದರು.
ಈ ಹಿಂದೆಯೂ ಭಾರತದ ಮೇಲೆ ಪಾಪಿ ಪಾಕಿಸ್ತಾನವು ಅಮಾಯಕ ಜನರ ಮೇಲೆ ದಾಳಿ ನಡೆಸುವ ಮೂಲಕ ತನ್ನ ದುಷ್ಟ ನೀತಿ ಅನುಸರಿಸುತ್ತಿದೆ. ಪಾಪಿ ಪಾಕಿಸ್ತಾನವು ನಮ್ಮ ವೀರ ಸೈನಿಕರ ಜೊತೆಗೆ ಯುದ್ದಕ್ಕೆ ನಿಲ್ಲದೇ ಹೇಡಿಯಂತೆ ಅಮಾಯಕರ ಮೇಲೆ ದಾಳಿ ನಡೆಸುತ್ತಿರುವದು ಹೇಡಿಯ ಲಕ್ಷಣಗಳನ್ನು ತೋರಿಸುತ್ತದೆ. ಪಾಕಿಸ್ತಾನ ಅಷ್ಟು ಶೂರಥವ, ವೀರತ್ವ ಹೊಂದಿದ್ದರೇ ನಮ್ಮ ಸೈನಿಕರ ವಿರುದ್ದ ಮುಖಾಮುಖಿಯಾಗಿ ಹೋರಾಡಲಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಇನ್ನೂ ವಿದ್ಯಾರ್ಥಿಗಳ ಕೈಯಲ್ಲಿ ಭಾರತ ನಕ್ಷೆ, ಭಾರತಮಾತೆ, ತ್ರೀವರ್ಣ ಧ್ವಜಗಳು ರಾರಾಜಿಸಿದವು.
ಈ ವೇಳೆ ಶಾಂತಿನಿಕೇತನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಸುರೇಶ ಬಿರಾದಾರ, ಅಧ್ಯಕ್ಷೆ ಶ್ರೀಮತಿ ಶೀಲಾ ಬಿರಾದಾರ, ನಿರ್ದೇಶಕರಾದ ಶರತ್ ಬಿರಾದಾರ, ಭರತ ಬಿರಾದಾರ ಹಾಗೂ ಶ್ರೀಮತಿ ದಿವ್ಯಾ ಬಿರಾದಾರ ಸೇರಿದಂತೆ ಪ್ರಿನ್ಸಿಪಲ್ ರಿಜೇಶ್, ಶಿಕ್ಷಕರು ಉಪಸ್ಥಿತರಿದ್ದರು. ಪಾಪಿ ಪಾಕಿಸ್ತಾನದ ವಿರುದ್ಧ ಭಾರತದ ಕ್ರಮ ಪಾಕಿಸ್ತಾನಕ್ಕೆ ಪಾಠವಾಗಲಿ, ಇನ್ನೊಂದು ಬಾರಿ ಭಾರತದ ಕಡೆ ಕಣ್ಣೆತ್ತಿ ನೋಡಲು ಹೆದರಬೇಕು ಅಂತಹ ತಕ್ಕ ಉತ್ತರ ಭಾರತದ್ದಾಗಲಿ ಎಂದು ಆಶಯ ವ್ಯಕ್ತಪಡಿಸಲಾಯಿತು.
ಒಟ್ನಲ್ಲಿ ಪಾಪಿ ಪಾಕಿಸ್ತಾನದ ವಿರುದ್ಧ ಒಂದು ಬಾರಿ ಕಠಿಣ ಕ್ರಮವಾಗಲಿ ಎನ್ನೋ ಒಕ್ಕೋರಲ ಆಗ್ರಹ ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ವಿದ್ಯಾರ್ಥಿಗಳು ಸಹ ಈ ಆಗ್ರಹಕ್ಕೆ ಸಾಥ್ ನೀಡುತ್ತಿದ್ದು ತಮ್ಮ ಮುಂದಿನ ಭವಿಷ್ಯ ನೆಮ್ಮದಿಯುತವಾಗಿರಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಧೈರ್ಯವಿದ್ದರೇ ನಮ್ಮ ಸೈನಿಕರ ಜೊತೆಗೆ ಹೋರಾಡಿ ಎಂಬ ಪಂಥಾಹ್ವಾನ ನೀಡಿದ್ದಾರೆ. ಪಾಕಿಸ್ತಾನ ನಮ್ಮ ದೇಶದ ಪುಟಾಣಿಗಳ ದೇಶಭಕ್ತಿ ನೋಡಿಯಾದ್ರೂ ಬುದ್ದಿ ಕಲಿಯಬೇಕಿದೆ.