ಆಂಟಿ ಕೊಲೆ ಪ್ರಕರಣ- ಪೊಲೀಸರ ದಿಕ್ಕು ತಪ್ಪಿಸಲು ಹೋಗಿ ಸಿಕ್ಕಿಬಿದ್ದ ಅಮ್ಮ, ಮಗಳು ಹಾಗೂ ಮಗ

ಬೆಳಗಾವಿ: ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಮಹಿಳೆಯ ಮನೆಗೆ ನುಗ್ಗಿ ಭೀಕರವಾಗಿ ಕೊಲೆ ಮಾಡಿ, ಆಕೆಯ ಮೈ ಮೇಲೆ ಇದ್ದು ಚಿನ್ನಾಭರಣ ದೋಚಲಾಗಿತ್ತು. ಈ ಪ್ರಕರಣ ಬೆಳಗಾವಿಯಲ್ಲಿ ಜನರನ್ನು ಬೆಚ್ಚಿ ಬಿಳುವಂತೆ ಮಾಡಿತ್ತು. ಕಳ್ಳರೆ ಕೊಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿತ್ತು.ಆದರೇ ಕೊಲೆಯ ಅಸಲಿ ಕಾರಣವೇ ಬೇರೆ ಇರೋದು ಪೊಲೀಸರ ತನಿಖೆ ವೇಳೆಯಲ್ಲಿ ಬಯಲಾಗಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಅಮ್ಮ, ಮಗಳು ಹಾಗೂ ಮಗನನ್ನು ಪೊಲೀಸರು ಸದ್ಯ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ಕೊಲೆಗೆ ಅಸಲಿ ಕಾರಣ ಏನ್ ಗೊತ್ತಾ!
ಈ ಫೋಟೋದಲ್ಲಿ ಕಾಣುತ್ತಿರೋ ಮಹಿಳೆಯ ಹೆಸರು ಅಂಜನಾ ದಡ್ಡೀಕರ್, ಬೆಳಗಾವಿ ನಗರದ ಗಣೇಶಪುರದ ಅಪಾರ್ಮ್ಮೆಂಟ್ ನಿವಾಸಿ. ಯಸ್ ಈ ಮಹಿಳೆಯನ್ನು ಮನೆಗೆ ನುಗ್ಗಿ ಇದೇ ಎಪ್ರಿಲ್ 22ರಂದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಚಿನ್ನಾಭರಣ ಕಳ್ಳತನ ಮಾಡಿ, ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಅಂಜನಾ ಹಾಗೂ ಪತಿ ಇಬ್ಬರೇ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದು, ಹೀಗಾಗಿ ಪ್ರಕರಣ ತೀವ್ರ ಸಂಚಲನೆ ಕಾರಣವಾಗಿತ್ತು. ಆದರೇ ಇದು ಚಿನ್ನಾಭರಣಕ್ಕಾಗಿ ನಡೆದ ಕೊಲೆ ಅಲ್ಲ. ಭೀಕರ ಕೊಲೆಯ ಹಿಂದೆ ಹಣಕಾಸಿನ ವ್ಯವಹಾರ ಇತ್ತು ಎನ್ನುವುದನ್ನು ಸದ್ಯ ಪೊಲೀಸರು ಬಹಿರಂಗ ಮಾಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಇದೇ ಬಡಾವಣೆಯ ಜ್ಯೋತಿ ಬಾಂಡೇಕರ್. ಆಕೆಯ ಮಗಳು ಸುಹಾನಿ ಬಾಂಡೇಕರ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಾಜರ್ ಮಾಡಿಸಿ, ಬಳಿಕ ಅವರ ಆರೋಗ್ಯ ಪರೀಕ್ಷೆಯನ್ನು ನಡೆಸಿ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿಗೆ ಬಿಟ್ಟು ಬರಲಾಗಿದೆ. ಅಷ್ಟಕ್ಕೂ ಕೊಲೆಗೆ ಚಿನ್ನಾಭರಣ ಕಾರಣವಲ್ಲ, ಇಬ್ಬರ ನಡುವೆ ಹಣಕಾಸಿ ವ್ಯವಹಾರ ಇರೋದು ಬಹಿರಂಗವಾಗಿದೆ. ಪ್ರಕರಣವನ್ನು ಬೆಳಗಾವಿಯ ಕ್ಯಾಂಪ್ ಪೊಲೀಸರು ಒಂದೇ ವಾರದಲ್ಲಿ ಪತ್ತೆ ಮಾಡಿದ್ದಾರೆ.
ಕೊಲೆಯಾದ ಆಂಟಿ ಅಂಜನಾ ದಡ್ಡೀಕರ್ ಸಾವಿಗೆ ಕೇವಲ 15 ಸಾವಿರ ರೂಪಾಯಿ ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಅಂಜಲಿಯಿಂದ 15 ಸಾವಿರ ಸಾಲವನ್ನು ಜ್ಯೋತಿ ಪಡೆದಿದ್ದರು. ಇದಕ್ಕೆ ಮಾಸಿಕವಾಗಿ ಶೇ. 10ರಷ್ಟು ಬಡ್ಡಿ ಕೊಡಬೇಕು ಎಂದು ಇಬ್ಬರ ನಡುವೆ ಕಾರು ಆಗಿತ್ತು. ಅದರಂತೆ ಪ್ರತಿ ತಿಂಗಳು ಅಂಜನಾ ದಡ್ಡೀಕರ್ ಗೆ ಜ್ಯೋತಿ 1500 ರೂಪಾಯಿ ಬಡ್ಡಿ ಪಾವತಿ ಮಾಡ್ತಿದ್ರು. ಆದರೇ ಕಳೆದ ಕೆಲ ತಿಂಗಳಿಂದ ಜ್ಯೋತಿ ಬಡ್ಡಿ ಕಟ್ಟಿರಲಿಲ್ಲ. ಹೀಗಾಗಿ ಅಂಜನಾ ದಡ್ಡೀಕರ್ ತನ್ನ ಪತಿಯ ಜೊತೆಗೆ ಹೋಗಿ ಜ್ಯೋತಿ ಮನೆಯಲ್ಲಿ ಗಲಾಟೆ ಮಾಡಿದ್ಲು. ಈ ವೇಳೆಯಲ್ಲಿ ಜ್ಯೋತಿ ನಿಮ್ಮ ಮನೆಗೆ ಬಂದು ವ್ಯವಹಾರ ಬಗೆಹರಿಸುತ್ತೇನೆ ಎಂದು ಅಂಜನಾಗೆ ಹೇಳಿ ವಾಪಸ್ ಕಳುಹಿಸಿದ್ದಳು. ಅದೇ ದಿನ ಮಧ್ಯಾಹ್ನ ಪುತ್ರ, ಪುತ್ರಿ ಜೊತೆಗೆ ಅಂಜನಾ ವಾಸವಿದ್ದ ಅಪಾರ್ಟ್ಮೆಂಟ್ ಗೆ ಜ್ಯೋತಿ ಬಂದಿದ್ದಳು. ಈ ವೇಳೆಯಲ್ಲಿ ಜ್ಯೋತಿ ಹಾಗೂ ಅಂಜನಾ ನಡುವೆ ಗಲಾಟೆಯಾಗಿದ್ದು, ಇದು ವಿಕೋಪಕ್ಕೆ ತಿರುಗಿದೆ. ಇಬ್ಬರು ಪರಸ್ಪರ ಕೈ ಕೈ ಮಿಲಾಯಿಸಿದ್ದು, ಅಂಜನಾ ತಲೆ ಗ್ಯಾಸ್ ಕಟ್ಟೆಗೆ ತುಗಲಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇದನ್ನು ನೋಡಿ ಗಾಬರಿಯಾದ ಜ್ಯೋತಿ ಹಾಗೂ ಅಕೆಯ ಮಗ, ಮಗಳು ಆಕೆಯ ಮೈ ಮೇಲೆ ಇದ್ದ ಚಿನ್ನಾಭಾರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಮೊದಲು ಬೇರೆಯ ವ್ಯಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಆದರೇ ಬಳಿಕ ಸಿಸಿಟಿವಿ ಹಾಗೂ ಟೆಕ್ನಿಕಲ್ ಎವಿಡನ್ಸ್ ಮೇಲೆ ಜ್ಯೋತಿ, ಸುಹಾನಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿದ್ದಾರೆ. ಕೊಲೆ ನಡೆದ ಬಳಿಕ ಆರೋಪಿಗಳು ಮುರುಡೇಶ್ವರಕ್ಕೆ ಹೋಗಿ ತಲೆಮರೆಸಿಕೊಂಡಿದ್ರು ಎನ್ನಲಾಗಿದೆ. ಇನ್ನೂ ಪೊಲೀಸರ ದಿಕ್ಕು ತಪ್ಪಿಸಲು ಅಂಜನಾ ಮೈ ಮೇಲೆ ಇದ್ದ 1.5 ಲಕ್ಷ ಮೌಲ್ಯದ ಮಂಗಳಸೂತ್ರ, ಕಿವಿಯೊಲೆ, ಉಂಗುರ ವಶಕ್ಕೆ ಪಡೆಯಲಾಗಿದೆ. ಕ್ಯಾಂಪ್ ಪೊಲೀಸರು ಒಂದೇ ವಾರದಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.