ವೈದ್ಯರಿಗೆ , ಕಾರ್ಯಕರ್ತರಿಗೆ, ಕ್ಷೇತ್ರದ ಜನರಿಗೆ ತುಂಬಾ ಚಿರಋಣಿ; ಹೆಬ್ಬಾಳ್ಕರ್.

ಬೆಳಗಾವಿ: ರಸ್ತೆ ಅಪಘಾತದಿಂದಾಗಿ ಕಳೆದ 13 ದಿನಗಳಿಂದ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಇಂದು ಡಿಸ್ಚಾರ್ಜ್ ಮಾಡಲಾಯಿತು.
ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಸ್ತೆ ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ ಬಂದಂತಾಗಿದೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ, ಸಚಿವೆಯಾಗಿ ನನಗೂ ಜವಾಬ್ದಾರಿ ಇದೆ. ಮಾರ್ಚ್ ತಿಂಗಳಲ್ಲಿ ಬಜೆಟ್ ಕೂಡ ಇದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಕೂಡ ಚನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ವಾರ ವಿಶ್ರಾಂತಿ ಹೇಳಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಜೀವನಕ್ಕೆ ಮರಳುತ್ತೇನೆ ಎಂದು ಸಚಿವರು ತಿಳಿಸಿದರು. ಕಳೆದ 13 ದಿನಗಳಿಂದ ಚಿಕಿತ್ಸೆ ನೀಡಿದ ವಿಜಯ ಆಸ್ಪತ್ರೆ ವೈದ್ಯ ಡಾ. ರವಿ ಪಾಟೀಲ್ ಅವರಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು. ಕಳೆದ 13 ದಿನಗಳು ನನಗೆ ಆಸ್ಪತ್ರೆಗಿಂತ ಮನೆಯಂತೆ ಭಾಸವಾಯಿತು. ನನ್ನ ಕುಟುಂಬಕ್ಕಿಂತ ಹೆಚ್ಚಾಗಿ ನನ್ನನ್ನು ನೋಡಿಕೊಂಡರು. ನನ್ನ ಕಷ್ಟದ ಸಮಯದಲ್ಲಿ, ವೈದ್ಯರು ನನ್ನ ಪಕ್ಕದಲ್ಲಿ ನಿಂತು, ಬೆಂಬಲ ಮತ್ತು ಕಾಳಜಿಯನ್ನು ತೋರಿದರು. ವೈದ್ಯರ ದಯೆ, ತಾಳ್ಮೆ ಮತ್ತು ಸಮರ್ಪಣೆ ಹೃದಯಸ್ಪರ್ಶಿಯಾಗಿತ್ತು. ಧೈರ್ಯ ಕಳೆದುಕೊಳ್ಳದಂತೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿ ನನ್ನ ಜೊತೆ ನಿಂತರು ಎಂದು ಸಚಿವರು ಹೇಳಿದರು.
ಇನ್ನು ಅಪಘಾತದ ಕುರಿತು ಮಾಹಿತಿ ನೀಡಿದ ಅವರು, ಸಂಕ್ರಾಂತಿ ದಿನ ಬೆಳಗ್ಗೆ 7 ಗಂಟೆಯೊಳಗೇ ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡೋಣ ಅಂತ ಜನವರಿ 13ರಂದು ರಾತ್ರಿ 10.30ರ ವೇಳೆಗೆ ನಿರ್ಧಾರ ಮಾಡಿ ಬೆಂಗಳೂರಿನಿಂದ ಹೊರಡಲಾಯಿತು. ಬಳಿಕ ಕುಟುಂಬ ಸದಸ್ಯರೊಂದಿಗೆ ಹಿರೇಹಟ್ಟಿಹೊಳಿಗೆ ಹೋಗಲು ತೀರ್ಮಾನಿಸಿದ್ದೇವು. ಪ್ರವಾಸ ದಿಢೀರ್ ನಿರ್ಧಾರ ಆಗಿದ್ದಕ್ಕೆ ಬೆಂಗಾವಲು ಪಡೆ ತೆಗೆದುಕೊಂಡಿರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನನ್ನ ಪುಣ್ಯವೇನೋ ಗೊತ್ತಿಲ್ಲ, ಇಲ್ಲಿನ ವೈದ್ಯರ ಕಾಳಜಿಯಿಂದ ಬೇಗ ಗುಣಮುಖ ಆದೆ. ಅಪಘಾತದ ಭಾವನೆ, ಆತಂಕ ಬಾರದಂತೆ ನೋಡಿಕೊಂಡರು, ಧೈರ್ಯ ತುಂಬಿದರು. ತಾಯಿ, ತಮ್ಮ, ಸೊಸೆ, ಮಗ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳುವೆ ಎಂದರು.
ಇನ್ನು ಚಿಕಿತ್ಸೆ ನೀಡಿದ ವಿಜಯಾ ಹಾಸ್ಪಿಟಲನ ಸಂಚಾಲಕರಾದ ಡಾ. ರವಿ ಪಾಟೀಲ್ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಚಿಕಿತ್ಸೆ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ. ತಜ್ಞರ ತಂಡದಿಂದ ಒಳ್ಳೆಯ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಸಚಿವರು ಕೂಡ ಒಳ್ಳೆಯ ಸ್ಪಂದನೆಯನ್ನು ನೀಡಿದ್ದಾರೆ. ಮುಂದಿನ 15 ದಿನಗಳಲ್ಲಿ ಜನಸೇವೆ ಅಣಿಯಾಗುವ ಸಾಧ್ಯತೆಯಿದೆ ಎಂದರು.