
ಬೆಳಗಾವಿ: ಸಿಪಿಎಡ್ ಮೈದಾನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ನುಸುಳಿ ಬಂದು ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿ ಗೊಂದಲ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಥೋಡ್ ಆದೇಶ ಹೊರಡಿಸಿದ್ದಾರೆ.
ಖಡೇಬಜಾರ್ ಠಾಣೆ ಪೇದೆ ಬಿ.ಎ ನೌಕುಡಿ ಮತ್ತು ಕ್ಯಾಂಪ್ ಠಾಣೆ ಪೇದೆ ಮಲ್ಲಪ್ಪ ಹಡಗಿನಾಳ ಅಮಾನತ್ತು ಮಾಡಲಾಗಿದೆ. ವೇದಿಕೆ ಮುಂಭಾಗದಲ್ಲಿ ಎಎಸ್ಪಿ, ಎಸಿಪಿ ದರ್ಜೆ ಅಧಿಕಾರಿಗಳು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಹೀಗಿದ್ದರೂ ಕಾನ್ಸಸ್ಟೇಬಲ್ ದರ್ಜೆಯ ಸಿಬ್ಬಂದಿ ಅಮಾನತು ಮಾಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಹಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಅಂದ್ರೆ ಅಮಾನತುಗೊಂಡ ಇಬ್ಬರೂ ಸಿಬ್ಬಂದಿ ವೇದಿಕೆ ಬಳಿ ಕರ್ತವ್ಯಕ್ಕೆ ಇರಲಿಲ್ಲಬಿ.ಎ ನೌಕುಡಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಹಾಗೂ ಮಲ್ಲಪ್ಪ ಹಡಗಿನಾಳ ಬೇರೆಡೆ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಹೀಗಿದ್ದರೂ ಇಬ್ಬರನ್ನೂ ಅಮಾನತು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಗುಪ್ತ ಮಾಹಿತಿ ಸಂಗ್ರಹಿಸಿ ಪ್ರತಿಭಟನೆ ತಡೆಯುವಲ್ಲಿ ವಿಫಲವಾಗಿದಕ್ಕೆ ಕ್ರಮ ಎಂದು ಸಸ್ಪೆಂಡ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.