ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ್ ಕಾಂಬಳೆ

ಬೆಳಗಾವಿ: ವಾಣಿಜ್ಯ ಪ್ರದೇಶ ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶೈಲ್ ಕಾಂಬಳೆ ಸೂಚನೆ ನೀಡಿದರು.
ಮಂಗಳವಾರ ಬೆಳಗಾವಿ ಪಾಲಿಕೆ ಸಭಾಂಗಣದಲ್ಲಿ ಆರೋಗ್ಯ ಸ್ಥಾಯಿ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಬೀದಿ ನಾಯಿಗಳ ಸಂತಾನ ಹರಣ ಮಾಡುವುದಾದರೆ ಮಾಡಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಪಾಲಿಕೆ ಅಧಿಕಾರಿ ಅಭಿಷೇಕ ಮಾತನಾಡಿ, ಬೀದಿ ನಾಯಿಗಳ ಸ್ಥಳಾಂತರ ಮಾಡುವ ವಿಷಯ ಎಬಿಸಿ ಸೆಕ್ಟರ್ ಗಾಗಿ ಒಂದು ಜಾಗ ನೋಡಿಕೊಂಡು ಬಂದಿದ್ದೇವೆ. ಬೆಳಗಾವಿ ನಗರದಿಂದ ಹೋಗಿ ಬರಲು ಒಂದೂವರೆ ಗಂಟೆಯಾಗುತ್ತದೆ. ನಾಯಿಗಳ ಸುರಕ್ಷತೆಯನ್ನು ನಾವು ನೋಡಿಕೊಳ್ಳಬೇಕಿದೆ. ಕೆಲ ದಿನಗಳಲ್ಲಿ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡಿ ಜಾಗದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಗಿರೀಶ್ ದೋಂಗಡಿ ಮಾತನಾಡಿ, ಬೀದಿ ನಾಯಿಗಳ ಸಂಖ್ಯೆ ಬೆಳೆಯುತ್ತಲೆ ಸಾಗಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಜನರು ಪಾಲಿಕೆಗೆ ಮುತ್ತಿಗೆ ಹಾಕುವ ಪ್ರಸಂಗ ಬರುತ್ತದೆ ಎಂದರು.
ಬೆಳಗಾವಿ ನಗರದಲ್ಲಿ ಫಾಗಿಂಗ್ ಮಷೀನ್ ಎಷ್ಟಿವೆ. ಸ್ವಚ್ಚ ಬೆಳಗಾವಿ, ಸುಂದರ ಬೆಳಗಾವಿ ಎಂದು ನಾವು ಅಭಿಯಾನ ಮಾಡುತ್ತಿದ್ದೇವೆ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದರೆ ಇವರಿಗೆ ಸರಿಯಾಗಿ ಬಿಸಿ ಮುಟ್ಟುತ್ತದೆ ಎಂದರು.
ಬೇಸಿಗೆ ಕಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಪರಿಸ್ಥಿತಿ ಇರುತ್ತದೆ. ಪಾಲಿಕೆಯಲ್ಲಿದ್ದ ಫಾಗಿಂಗ್ ಮಷೀನ್ ಬಳಕೆ ಮಾಡಿಕೊಂಡು ನಗರದ ತುಂಬ ಫಾಗಿಂಗ್ ಮಾಡುವ ಕೆಲಸ ಮಾಡಬೇಕೆಂದು ಸೂಚಿಸಿದರು.ಪಾಲಿಕೆ ಆರೋಗ್ಯಾಧಿಕಾರಿ ಡಾ. ಸಂಜೀವ ನಾಂದ್ರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.