
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ್ ಭಟ ಅವರು ಇತ್ತೀಚೆಗೆ ಜರುಗಿದ ಎನಕೌಂಟರ್ ನಡೆದ ಸ್ಥಳ ಪರಿಶೀಲನೆ ಮಾಡಿದರು.ನಂತರ ಅವರು ಸಂತ್ರಸ್ತ, ಮೃತ ಬಾಲಕಿ ಮನೆಗೆ ಭೇಟಿ ನೀಡಿ, ಅವಳ ಪಾಲಕರಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ಎನಕೌಂಟರ ಮಾಡಿದ ಮಹಿಳಾ ಪಿಎಸ್ಐ ಹಾಗೂ ದೂರುದಾರ ಅಶೋಕನಗರ ಪಿಐ ಅವರಿಂದಲೂ ಇಡೀ ಘಟನೆಯ ಕುರಿತು ವಿವರ ಪಡೆದರು.
ನಂತರ ಅವರು ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ ದಲ್ಲಿ ಸುದ್ದಿಗೋಷ್ಠಿಯಲ್ಲಿ ಜರುಗಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಇತ್ತಿಚೆಗೆ ನಡೆದೆ ಎನಕೌಂಟರ್ ಕುರಿತು ಆಯೋಗಕ್ಕೆ ದೂರು ದಾಖಲಾಗಿದೆ. ಆಯೋಗದ ಪೊಲೀಸ ವಿಭಾಗಕ್ಕೆ ತನಿಖೆ ಮಾಡಿ, ವರದಿ ನೀಡಲು ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಸ್ಥಳ ಭೇಟಿ, ಸಂಬಂಧಿಸಿದವರಿಂದ ಆರಂಭಿಕ ಮಾಹಿತಿ ಸಂಗ್ರಹಿಸಲಾಗಿದೆ.
ನಿಯಮಾನುಸಾರ ತನಿಖೆ ಮಾಡಿ ಮುಂದಿನ ಎರಡುಮೂರು ತಿಂಗಳಲ್ಲಿ ಸೂಕ್ತ ಶಿಪಾರಸ್ಸುಗಳೊಂದಿಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೆ, ಸಿಐಡಿ ತನಿಖೆ ಆರಂಭವಾಗಿದೆ. ಅವರು ವರದಿಯನ್ನು ಕೋರ್ಟ್ ಗೆ ಸಲ್ಲಿಸುತ್ತಾರೆ. ಮಾನವ ಹಕ್ಕುಗಳ, ಜೀವಿಸುವ ಹಕ್ಕುಗಳ ಹಿನ್ನಲೆಯಲ್ಲಿ ನಾವು ಮಾಡಿದ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಎಸ್.ಕೆ.ವಂಟಗೋಡಿ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ, ಆಯೋಗದಲ್ಲಿನ ಪೊಲೀಸ ತನಿಖಾ ವಿಭಾಗದ ಡಿವೈಎಸ್ಪಿ ಸುಧೀರ ಹೆಗಡೆ ಇದ್ದರು.
ಆಯೋಗ ಅಧ್ಯಕ್ಷರ ಸ್ಥಳ ಭೇಟಿ ಸಂದರ್ಭದಲ್ಲಿ ಮಹಾನಗರ ಉಪ ಪೊಲೀಸ ಆಯುಕ್ತರಾದ ಮಾನಿಂಗ ನಂದಗಾವಿ, ರವೀಶ ಸಿ.ಆರ್. ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.