
ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿ 27 ವರ್ಷಗಳ ಬಳಿಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯ್ದೆ (ಪಿಟಿಸಿಎಲ್) ಅಡಿಯಲ್ಲಿ ಹಕ್ಕು ಮರು ಸ್ಥಾಪನೆ ಕೋರುವುದು ನಿರ್ಲಕ್ಷ್ಯತನ ಮತ್ತು ದಬ್ಬಾಳಿಕೆಯ ಸ್ವರೂಪದ್ದಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಕಕ್ಷಿದಾರನ ಕಡೆಯಿಂದ ಉದಾಸೀನತೆಯ ನಡೆಯಾಗಿದೆ. ಈ ನಿರ್ಲಕ್ಷ್ಯಕ್ಕೂ ಕಾಲಮಿತಿ ಅಥವಾ ವಿಳಂಬಕ್ಕೆ ಯಾವುದೇ ಸಂಬಂಧವಿಲ್ಲ. ಏಕ ಸದಸ್ಯ ಪೀಠದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಜೊತೆಗೆ, ಪಿಟಿಸಿಎಲ್ ಕಾಯ್ದೆ ಸೆಕ್ಷನ್ 5ಕ್ಕೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮವನ್ನು ಹೈಕೋರ್ಟ್ನಲ್ಲಿ ಮತ್ತೊಂದು ಪೀಠದಲ್ಲಿ ಪ್ರಶ್ನಿಸಲಾಗಿದ್ದು, ಇನ್ನೂ ವಿಚಾರಣಾ ಹಂತದಲ್ಲಿದೆ. ಈವರೆಗೆ ಯಾವುದೇ ಆದೇಶ ಹೊರಬಂದಿಲ್ಲ. ಆದ್ದರಿಂದ ಸೆಕ್ಷನ್ 5ರ ತಿದ್ದುಪಡಿ ತಂದಿರುವುದನ್ನು ಪರಿಗಣಿಸಿ ಆದೇಶ ನೀಡಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ