
ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಇಂದಿನಿಂದ ಆರಂಭಗೊಂಡಿದ್ದು, ಬೆಳಗಾವಿಯಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ನಡೆಸಲಾಯಿತು.
ಸಮಾನತೆಯ ಹರಿಕಾರ, ಮಹಾನ್ ಮಾನವತಾವಾದಿ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತ್ಯೋತ್ಸವಕ್ಕೆ ಇಂದಿನಿಂದ ಬೆಳಗಾವಿಯಲ್ಲಿ ಆರಂಭಗೊಂಡಿದೆ. ಇಂದು ಬೆಳಗಾವಿಯ ಬಸವ ವೃತ್ತದ ಉದ್ಯಾನದಲ್ಲಿರುವ ಜಗಜ್ಯೋತಿ ಶ್ರೀ ಬಸವೇಶ್ವರರ ಮೂರ್ತಿಗೆ ನಾಗನೂರು ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಸ್ವಾಮಿಜೀ ಮತ್ತು, ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳ ಉಪಸ್ಥಿತಿಯಲ್ಲಿ ಮಹಾಪೌರರಾದ ಮಂಗೇಶ್ ಪವಾರ್, ಉಪಮಹಾಪೌರರಾದ ವಾಣಿ ಜೋಷಿ, ಸಂಸದರಾದ ಜಗದೀಶ್ ಶೆಟ್ಟರ್, ಉತ್ತರ ಶಾಸಕರಾದ ಅಭಯ್ ಪಾಟೀಲ್, ಕೆ.ಎಲ್.ಇ ಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ ಇನ್ನುಳಿದ ಗಣ್ಯರು ಮಾಲಾರ್ಪಣೆಯನ್ನು ಮಾಡಿ, ಷಟಸ್ಥಲ ಧ್ವಜಾರೋಹನವನ್ನು ಮಾಡಿ ಬೈಕ್ ರ್ಯಾಲಿಗೆ ಚಾಲನೆಯನ್ನು ನೀಡಿದರು.
ಸಂಸದ ಜಗದೀಶ್ ಶೆಟ್ಟರ್ ಅವರು ಇಡೀ ರಾಜ್ಯದಲ್ಲಿ ಬಸವ ಜಯಂತಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಬೆಳಗಾವಿಯಲ್ಲಿಯೂ ಅತಿ ವಿಜೃಂಭಣೆಯಿಂದ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. 30 ರಂದು ನಡೆಯಲಿರುವ ಬಸವ ಜಯಂತಿಯ ಪೂರಕವಾಗಿ ಇಂದು ಬೆಳಗಾವಿ ನಗರದಲ್ಲಿ ಬೈಕ್ ರ್ಯಾಲಿಯನ್ನು ನಡೆಸಲಾಗುತ್ತಿದೆ. ಸಾವಿರಾರು ಜನರು ಇದರಲ್ಲಿ ಭಾಗಿಯಾಗಿ ಸಮಾಜಕ್ಕೆ ಬಸವ ಸಂದೇಶವನ್ನು ನೀಡಲಾಗುತ್ತಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಬಸವಣ್ಣ ಮತ್ತು ಶರಣರ ವಚನಗಳನ್ನು ಸಮಾಜಕ್ಕೆ ತಿಳಿಸಿ ಪರಿವರ್ತನೆಯನ್ನು ತರಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಬೀಜವನ್ನು ಬಿತ್ತಿದ್ದರು. ರಾಜ್ಯ ಸರ್ಕಾರವಾಗಲಿ ಬೇರೆ ಸಂಘಟನೆಗಳೇ ಆಗಲಿ, ಬಸವ ಜಯಂತಿಯನ್ನು ಆಚರಿಸಿದರೂ ಸ್ವಾಗತ. ಲೋಕಸಭೆಯಲ್ಲಿಯೂ ಬಸವೇಶ್ವರರ ಜಯಂತಿಯನ್ನು ಆಚರಿಸಲಾಗುತ್ತಿದೆ. ಆಂಗ್ಲ ಸೇರಿದಂತೆ ವಿವಿಧ ಭಾಷೆಗಳಲ್ಲಿ ವಚನ ಸಾಹಿತ್ಯವನ್ನು ಭಾಷಾಂತರಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತಿಳಿಸಬೇಕಾಗಿದೆ ಎಂದರು. ಬೈಟ್
ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಬೈಕ್ ರ್ಯಾಲಿಯೂ, ಆರ್.ಪಿ.ಡಿ. ಕಾರ್ನರ್, ಗೋಮಟೇಸ್ ರಸ್ತೆ, ಶಹಾಪೂರ, ವಡಗಾಂವ, ಶ್ರೀ ಕಪಿಲೇಶ್ವರ್ ಮೇಲ್ಸೇತುವೆ, ಖಡೇ ಬಝಾರ್, ಲಿಂಗರಾಜ್ ಅರಸ್ ಕಾಲೇಜ್ ರಸ್ತೆ, ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಮಹಾಂತೇಶ್ ನಗರದಲ್ಲಿ ಸಂಚರಿಸಿ, ರಾಮತೀರ್ಥ ನಗರಕ್ಕೆ ತಲುಪಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಲಿಂಗಾಯಿತ ಸಮಾಜ ಪ್ರಮುಖರಾದ ಬಸವರಾಜ್ ರೊಟ್ಟಿ, ಶಂಕರ್ ಗುಡಸ್, ರತ್ನಪ್ರಭಾ ಬೆಲ್ಲದ ಇನ್ನುಳಿದ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.