ಪಕ್ಕದ ಮನೆಯವನ ಕಿರುಕುಳದಿಂದ ನೊಂದು ಬಾಲಕಿ ಆತ್ಮಹತ್ಯೆ.

ಬಳ್ಳಾರಿ: ಪಕ್ಕದ ಮನೆಯಾತನ ಮಾನಸಿಕ, ದೈಹಿಕ ಕಿರುಕುಳದಿಂದ ನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಡೂರು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ತನ್ನ ಪಕ್ಕದ ಮನೆಯ ವ್ಯಕ್ತಿ ಸುರೇಶ ಎಂಬವನ ಹೆಸರನ್ನು ಡೆತ್ ನೋಟ್ನಲ್ಲಿ ಬರೆದಿಟ್ಟು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಭಂಗ ಮಾಡಿ, ಕಿರುಕುಳ ನೀಡಿದ್ದಾನೆ, ಅವನನ್ನು ಬಿಡಬೇಡಿ ಎಂದು ಅಪ್ರಾಪ್ತೆ ತಿಳಿಸಿದ್ದಾಳೆ.
ಈ ಕುರಿತು ಬಾಲಕಿಯ ತಂದೆ ಮಾತನಾಡಿದ್ದು, “ನಾನು ಮದುವೆಗೆ ಹೋಗಿದ್ದೆ, ನಮ್ಮ ಮನೆಯ ಹೆಂಗಸರು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲ್ಲ ನೀನು ಇಲ್ಲಿಯೇ ಇರು ಎಂದು ಮಗಳಿಗೆ ಹೇಳಿ ಹೋಗಿದ್ದೆವು. ಒಂದು ತಿಂಗಳ ಮುಂಚಿತವಾಗಿಯೇ ಮಗಳು ಸುರೇಶನಿಗೆ ಎಚ್ಚರಿಸುವಂತೆ ಹೇಳಿದ್ದಳು. ಅದಕ್ಕೆ ನಾನು ಗಲಾಟೆ ಮಾಡಿಕೊಳ್ಳುವುದು ಬೇಡ. ನಾನು ಕಣ್ಣಾರೆ ಕಂಡಾಗ ಅವನಿಗೆ ಎಚ್ಚರಿಸುತ್ತೇನೆ ಎಂದಿದ್ದೆ. ನಾವಿಲ್ಲದ ವೇಳೆ ಬರುತ್ತಿದ್ದ, ಒಳಗೆ ಹೋಗಿ ಕುಳಿತುಕೊಳ್ಳುತ್ತಿದ್ದ” ಎಂದು ಆರೋಪಿಸಿದ್ದಾರೆ.
“ನನ್ನ ಮಗಳಿಗೆ ಬಹಳ ಟಾರ್ಚರ್ ಕೊಡುತ್ತಿದ್ದ, ನಾವಿಲ್ಲದಾಗ ಬರುತ್ತಿದ್ದ, ಮೊನ್ನೆ ನಾವು ಮನೆಯಲ್ಲಿ ಇಲ್ಲದಿದ್ದಾಗ ಬಂದು ದೈಹಿಕ ಕಿರುಕುಳ ನೀಡಿದ್ದಾನೆ. ಮಗಳು ಲೆಟರ್ ಬರೆದಿಟ್ಟಿದ್ದಾಳೆ” ಎಂದು ಬಾಲಕಿಯ ತಾಯಿ ಹೇಳಿದ್ದಾರೆ.