Uncategorized

ಬೆಳಗಾವಿ ಸರ್ದಾರ ಮೈದಾನದಲ್ಲಿಸರಸ್ ಮೇಳ – ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ; ಹರಿದು ಬಂತು ಜನಸಾಗರ

ಬೆಳಗಾವಿ: ಕಾಂಗ್ರೆಸ್​​​​​​ ಅಧಿವೇಶನದ ಶತಮಾನೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಆಯೋಜಿಸಿರುವ ಅಸ್ಮಿತೆ ಮಾರಾಟ ಮೇಳ, ಸರಸ್​​ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನರ ದಂಡೇ ಹರಿದು ಬರುತ್ತಿದೆ. 4 ದಿನಗಳಲ್ಲಿ ಬರೋಬ್ಬರಿ 1.03 ಕೋಟಿ ರೂ. ವ್ಯಾಪಾರ ವಹಿವಾಟು ಕಂಡು ಬಂದಿದೆ.

ಬೆಳಗಾವಿ ಸರ್ದಾರ ಮೈದಾನದಲ್ಲಿ ಡಿ.26ರಿಂದ ಜ. 4ರವರೆಗೆ ನಡೆಯುತ್ತಿರುವ ಸರಸ್ ಮೇಳ – ಖಾದಿ ಉತ್ಸವ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಜನಾಕರ್ಷಣೀಯ ಕೇಂದ್ರ ಬಿಂದುವಾಗಿ ಮಾರ್ಪಾಡಾಗಿದೆ. ಡಿ.26 ರಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಚಾಲನೆ ನೀಡಿದ್ದರು‌. ರಾಜ್ಯದ ಜಿಲ್ಲೆ, ತಾಲೂಕುಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದು, ವ್ಯಾಪಾರದಲ್ಲಿ ತೊಡಗಿದ್ದಾರೆ. ಹೊರ ರಾಜ್ಯಗಳ ಖಾದಿ ಕಸಬುದಾರರು ತಮ್ಮ ಉತ್ಪನ್ನ ತಂದಿದ್ದಾರೆ. ಒಟ್ಟು 200 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 150 ಸ್ವಸಹಾಯ ಸಂಘಗಳು, 50 ಖಾದಿ ಉತ್ಪನ್ನಗಳು ಮತ್ತು 10 ಆಹಾರ ಮಳಿಗೆಗಳು ವ್ಯಾಪಾರ ನಡೆಸುತ್ತಿವೆ.

ಪ್ರತಿಯೊಂದು ಮಳಿಗೆಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಸ್ವ- ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳ ಮಹಾಪೂರವೇ ಹರಿದು ಬಂದಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಗ್ರಿಗಳು , ಮೊಳಕಾಲ್ಮೂರು ಸೀರೆಗಳು, ಇಳಕಲ್​ ಸೀರೆಗಳು, ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ನಾರಿನ ಉತ್ಪನ್ನದ ಬ್ಯಾಗ್​ಗಳು, ಮಸಾಲಾ ಉತ್ಪನ್ನಗಳು, ಸಿರಿ ಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ವಿವಿಧ ಬಗೆಯ ಖಾದಿ ಉತ್ಪನ್ನಗಳು ಗ್ರಾಹಕರ ಸೆಳೆಯುತ್ತಿವೆ.

ಅಲ್ಲದೇ, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಯುತ ಉತ್ಪನ್ನಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಕಂಬಳಿ, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ ಅನೇಕ ಉತ್ಪನ್ನಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ.

Related Articles

Leave a Reply

Your email address will not be published. Required fields are marked *

Back to top button