Uncategorized

ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಇಂದು ಚುನಾವಣೆಸಂಜೆ 5 ಗಂಟೆಗೆ ಫಲಿತಾಂಶ

ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದೆ. ಏಳು ಸ್ಥಾನಗಳಿಗೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ನಾಲ್ಕು ಅಭ್ಯರ್ಥಿಗಳ ಆಯ್ಕೆ ದಾರಿ ಸಲೀಸಾಗಿದೆ. ಆದರೆ, ಐದನೇ ಅಭ್ಯರ್ಥಿಯ ಗೆಲುವಿನ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ನಡುವೆ ಜೆಡಿಎಸ್ ಗೋವಿಂದರಾಜು ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಹೀಗಾಗಿ ಚುನಾವಣೆ ಕಾವು ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಹಣಾಹಣಿ ಏರ್ಪಟ್ಟಿದೆ.

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್‌ನಿಂದ 5 ಅಭ್ಯರ್ಥಿಗಳು ಕಣದಲ್ಲಿದ್ದು, ಒಬ್ಬ ಅಭ್ಯರ್ಥಿ ಗೆಲುವಿಗೆ ತಲಾ 28 ಮತಗಳು ಅಗತ್ಯವಿದೆ. ಮೊದಲ 4 ಅಭ್ಯರ್ಥಿಗಳಿಗೆ ತಲಾ 29 ಮತ ಹಾಕಿಸಲು ತೀರ್ಮಾನ ಮಾಡಲಾಗಿದೆ. ಓರ್ವ ಅಭ್ಯರ್ಥಿಗೆ ತಲಾ 29 ಮತದಂತೆ ನಾಲ್ವರಿಗೆ ಒಟ್ಟು 116 ಮತಗಳನ್ನು ಹಾಕುವ ಮೂಲಕ ಗೆಲ್ಲಿಸಲಾಗುತ್ತೆ. ಹಾಗೆ 5ನೇ ಅಭ್ಯರ್ಥಿಗೆ ಕಾಂಗ್ರೆಸ್‌ನ 19 ಮತಗಳು ಹಾಕಿಸಲು ತೀರ್ಮಾನ ಮಾಡಲಾಗಿದೆ.

ಯಾವ ಪಕ್ಷದ ಶಾಸಕರ ಸಂಖ್ಯೆ ಎಷ್ಟಿದೆ?
ಒಟ್ಟು ಶಾಸಕರು: 222
ಕಾಂಗ್ರೆಸ್: 135
ಬಿಜೆಪಿ: 62
ಜೆಡಿಎಸ್: 18
ಪಕ್ಷೇತರರು: 2
ಸರ್ವೋದಯ ಪಕ್ಷ: 1
ಬಿಜೆಪಿ ಉಚ್ಚಾಟಿತರು: 3

5ನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ ನಡುವೆ ಕಾದಾಟ:
7 ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 4, ಬಿಜೆಪಿಗೆ 2 ಸ್ಥಾನಕ್ಕೆ ಯಾವುದೇ ತಲೆನೋವು ಇಲ್ಲ. ಆದರೆ 5ನೇ ಸ್ಥಾನಕ್ಕೆ ಜೆಡಿಎಸ್-ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್ ಶಾಸಕರನ್ನು ಬಿಡದಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಇತ್ತ ದೇವನಹಳ್ಳಿಯ ಖಾಸಗಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರನ್ನು ಸ್ಥಳಾಂತರಿಸಲಾಗಿದೆ. ಕುಮಾರಸ್ವಾಮಿ ಅಡ್ಡ ಮತದಾನ ಮಾಡದಂತೆ ಶಾಸಕರಿಗೆ ಸೂಚಿಸಿದ್ದಾರೆ.

ಈ ಮಧ್ಯೆ ಜೆಡಿಎಸ್ ಶಾಸಕರು ಇರುವ ರೆಸಾರ್ಟ್‌ಗೆ ಅನಾರೋಗ್ಯದ ನೆಪ ಹೇಳಿ ಜಿ.ಟಿ ದೇವೇಗೌಡ ಗೈರಾಗಿದ್ದು, ವಿಧಾನಸೌಧಕ್ಕೆ ಬರುತ್ತೇನೆ. ಮತ ಹಾಕುತ್ತೇನೆ ಎಂದು ಆಪ್ತರ ಬಳಿ ಜಿಟಿ ದೇವೇಗೌಡ ಹೇಳಿಕೊಂಡಿದ್ದಾರೆ. ಅಪ್ಪನಿಗೆ ಪುತ್ರ ವಿಪ್ ಜಾರಿ ಮಾಡಿದ್ದು, ಸದ್ಯ ಜಿಟಿ ದೇವೇಗೌಡ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ತಮ್ಮ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ತಮ್ಮದೇ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರೆ.

ಕಾಂಗ್ರೆಸ್ಸಿನ 5ನೇ ಅಭ್ಯರ್ಥಿ ಗೆಲುವಿನ ಲೆಕ್ಕಾಚಾರ:
– ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 135
– ಪ್ರತಿ ಅಭ್ಯರ್ಥಿಗಳಿಗೆ ತಲಾ 28 ಮತಗಳು ಬೇಕು
– 4 ಅಭ್ಯರ್ಥಿಗಳಿಗೆ ತಲಾ 29 ಮತ ಹಾಕಿದ್ರೆ 116 ಮತಗಳು ಖಾಲಿ
– 5ನೇ ಅಭ್ಯರ್ಥಿಗೆ ಉಳಿದ 19 ಮತಗಳು
– ಬಾಕಿ ಉಳಿದ 9 ಮತಗಳಿಗೆ ರಣತಂತ್ರ
– ಕಡಿಮೆ ಇರುವ 4 ಮತಗಳನ್ನು ಸೆಳೆಯೋ ಪ್ರಯತ್ನ
– 2ನೇ ಪ್ರಾಶಸ್ತ್ಯದ ಮತ ಮೂಲಕ ಗೆಲ್ಲುವ ವಿಶ್ವಾಸ

ಜೆಡಿಎಸ್ ಲೆಕ್ಕಾಚಾರ ಏನು?
– ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತಗಳು
– ಉಳಿದ 4 ಮತಗಳು ಜೆಡಿಎಸ್‌ಗೆ ಹಾಕುವ ತಂತ್ರ
– ಜೆಡಿಎಸ್ 18+ಬಿಜೆಪಿ ಸೇರಿದ್ರೆ 22 ಮತಗಳು
(ಯತ್ನಾಳ್, ರೆಡ್ಡಿ ಸೇರಿದ್ರೆ 24 ಮತಗಳು ಆಗಲಿದೆ)
– ಉಳಿದ 4 ಮತಗಳನ್ನು ಕಾಂಗ್ರೆಸ್ಸಿನಿಂದ ಸೆಳೆಯೋ ತಂತ್ರ ಹೆಣೆದಿದೆ.

ವಿಧಾನಸೌಧ ಸುತ್ತಮುತ್ತ ನಿಷೇಧಾಜ್ಞೆ:
ಇಂದು ಪರಿಷತ್ ಚುನಾವಣೆ ಹಿನ್ನೆಲೆ ವಿಧಾನಸೌಧ ಹಾಗೂ ಸುತ್ತಮುತ್ತಲ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಎಲೆಕ್ಷನ್‌ಗೆ ಸಂಬಂಧಪಟ್ಟವರು, ಶಾಸಕ, ಸಚಿವರು, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಚುನಾವಣೆ ಬಳಿಕ ಯಾವುದೇ ಸಂಭ್ರಮಕ್ಕೂ ಅವಕಾಶವಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ ಎಂದು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಒಟ್ಟಾರೆ, ಸಂಜೆ 5 ಗಂಟೆಗೆ ಫಲಿತಾಂಶ ಹೊರಬೀಳಲಿದ್ದು, ಯಾರಿಗೆ 5ನೇ ಸ್ಥಾನ ಸಿಗಲಿದೆ ಎಂಬುದೇ ಕುತೂಹಲವಾಗಿದೆ.

Related Articles

Leave a Reply

Your email address will not be published. Required fields are marked *

Back to top button