2 ತಿಂಗಳಲ್ಲಿ ಬರೋಬ್ಬರಿ 6.5 ಕೋಟಿಗೂ ಅಧಿಕ ಹಣ ಗುಳುಂ.

ಬಾಗಲಕೋಟೆ: 2 ತಿಂಗಳಲ್ಲಿ ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಜನರು ಕಳೆದುಕೊಂಡಿದ್ದು ಬರೋಬ್ಬರಿ 6.5 ಕೋಟಿಗೂ ಅಧಿಕ ಹಣ ಗುಳುಂ ಮಾಡಲಾಗಿದೆ. ಉದ್ಯಮಿಗಳು, ಇಂಜಿನಿಯರ್ಸ್ ಗಳು, ವೈದ್ಯರು, ಸರ್ಕಾರಿ ನೌಕರರು & ನಿವೃತ್ತ ನೌಕರರು ಸೇರಿ ಕಲಿತವರನ್ನೇ ಖದೀಮರು ಟಾರ್ಗೆಟ್ ಮಾಡಿದ್ದಾರೆ. ಐಇಎಫ್, ಬಿಎನ್ ಫಾಸ್ಟ್ರೆಕ್, ಮಿಂಟ್, ಕೊಯಿನ್ ಡಿಸಿಎಕ್ಸ್ ಸೇರಿದಂತೆ ವಿವಿಧ ನಕಲಿ ಕಂಪನಿಗಳ ಆಪ್ ಮೂಲಕ ಹಣ ಎಗರಿಸಿದ್ದಾರೆ. ಒಬ್ಬರದ್ದು ಸಾವಿರದಿಂದ ಶುರುವಾಗಿ 45 ಲಕ್ಷ, ಇನ್ನೊಬ್ಬರದ್ದು 80 ಲಕ್ಷ , ಮತ್ತೊಬ್ಬರದ್ದು 4 ಕೋಟಿ ಹೀಗೆ ಸಾವಿರದಿಂದ ಹಿಡಿದು ಲಕ್ಷ , ಕೋಟಿವರೆಗೂ ಹಣ ಆನಲೈನ್ ಖದೀಮರು ಕೊಳ್ಳೆ ಹೊಡೆದಿದ್ದಾರೆ.
ಒಂದು ಕಡೆ ಹೆಚ್ಚಿನ ಲಾಭಾಂಶಕ್ಕೆ ಹಣ ಹೂಡಿಕೆ, ಮತ್ತೊಂದೆಡೆ ಡಬ್ಲಿಂಗ್ ಆಗುವ ಆಶಯದಿಂದ ಹಣ ಹೂಡಿದವರಿಗೆ ವಂಚಿಸಲಾಗಿದೆ. ಇತ್ತ ಟ್ರೇಡಿಂಗ್ ಆಪ್ ಕಳಿಸಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶ ನೀಡುವ ಆಸೆ ತೋರಿಸಿ ಗೋಲಮಾಲ್ ಮಾಡಲಾಗಿದೆ.
ಮೊದ ಮೊದಲು ಆಪ್ ಕಳಿಸುವ ಆಗಂತಕರು ಬಳಿಕ ಆಪ್ ಡೌನಲೋಡ್ ಮಾಡುತ್ತಲೇ ಮೋಸಗಾರರ ಟೀಂ ಅನಾವರಣಗೊಳ್ಳುತ್ತದೆ. ಆರಂಭದಲ್ಲಿ 10 ರಿಂದ 15 ಸಾವಿರದ ಹಣ ಹೂಡಿಕೆ ತೋರಿಸಲಾಗುತ್ತದೆ. ಗ್ರೂಪ್ ನಲ್ಲಿ ಅವರವರಲ್ಲೇ ಚಾಟಿಂಗ್ ಮಾಡಿ, ಹೊಸದಾಗಿ ಸೇರಿದ ಅಮಾಯಕರಲ್ಲಿ ಇನ್ನಷ್ಟು ನಂಬಿಕೆ ಮೂಡಿಸಲಾಗುತ್ತದೆ. ಬರುಬರುತ್ತಾ ಹಣ ಹೂಡಿಕೆ ಮಾಡುತ್ತಾ ಹೋದಂತೆ ಲಾಭಾಂಶ ಮರಳಿ ಬಾರದಂತೆ ನೋಡಿಕೊಳ್ಳಲಾಗುತ್ತದೆ. ನಂತರ ಲಕ್ಷ ,ಲಕ್ಷ , ಕೋಟಿ ಕೋಟಿ ಹಣ ಹೂಡಿಕೆ ಮಾಡಿಸಿ ಹಣ ಹೊಡೆದು ಎಸ್ಕೇಪ್ ಆಗುತ್ತಾರೆ. ಕೊನೆಗೆ ವಂಚನೆ ಅಂತ ಗೊತ್ತಾಗುತ್ತಲೇ, ಹೂಡಿಕೆ ಮಾಡಿದ ಹಣ ಬಾರದೇ ಹೋದಾಗ ಅಮಾಯಕರು ಪೊಲೀಸರ ಮೊರೆ ಹೋಗುತ್ತಿದ್ದಾರೆ.
ಸಿಇಎನ್ ಪೋಲಿಸ ಠಾಣೆಗೆ ನ್ಯಾಯಕ್ಕಾಗಿ ಬಂದವರೆಲ್ಲಾ ಅಕ್ಷರಸ್ಥರೇ ಅನ್ನೋದೆ ದುರಂತ. ಬಾಗಲಕೋಟೆ ಸಿಇಎನ್ ಪೋಲಿಸ ಠಾಣೆಯಲ್ಲಿ ಆನಲೈನ್ ದೋಖಾ ಕೇಸ್’ಗಳು ಹೆಚ್ಚಾಗುತ್ತಿವೆ. ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದ ಸಿಇಎನ್ ಪೋಲಿಸರಿಗೆ ಅಚ್ಚರಿ ಕಾದಿದೆ. ಬಿಹಾರ, ಉತ್ತರಪ್ರದೇಶ, ರಾಜಸ್ಥಾನ ಹೀಗೆ ದೇಶದ ಬೇರೆ ಬೇರೆ ರಾಜ್ಯದ ಜನರ ಅಕೌಂಟ್ ಗೆ ಹಣ ರವಾನೆಯಾಗಿದೆ. ಒಂದೊಂದು ಪ್ರಕರಣಗಳಲ್ಲಿ ಒಂದೊಂದು ರೀತಿಯ ಆನಲೈನ್ ಧೋಖಾಗಳು ಬೆಳಕಿಗೆ ಬಂದಿವೆ. ಆನಲೈನ್ ಹೂಡಿಕೆಗೂ ಮುನ್ನ ಯೋಚಿಸಿ, ವಂಚನೆಗೆ ಒಳಗಾಗಬೇಡಿ, ಸಮಸ್ಯೆ ಆದ್ರೆ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ ಎಂದು ಬಾಗಲಕೋಟೆ ಎಸ್.ಪಿ. ಅಮರನಾಥ ರೆಡ್ಡಿ ಮನವಿ ಮಾಡಿದ್ದಾರೆ.