ಪರಿಶಿಷ್ಟ ಪಂಗಡ ಒಳಮೀಸಲಾತಿ ಗೊಂದಲದ ಹಿನ್ನೆಲೆ ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ;ಸಿಎಂ

ಪರಿಶಿಷ್ಟ ಪಂಗಡ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ 3 ಹಂತದಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿಯನ್ನು ನೀಡಿದರು. ಮಾತನಾಡಿದ ಅವರು, ಮೊದಲನೇ ಹಂತದ ಸಮೀಕ್ಷೆ ಇಂದಿನಿಂದಲೇ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಾಗುತ್ತದೆ. ಎರಡನೇ ಹಂತ ಮೇ 5 ರಿಂದ ಶುರುವಾಗಲಿದೆ. ಇದಕ್ಕಾಗಿ ವಿಶೇಷ ಶಿಬಿರಗಳಲ್ಲಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದರು.ಅಲ್ಲದೇ 3 ನೇ ಹಂತ ಆನ್ ಲೈನ್ ಮೂಲಕ ನಡೆಯಲಿದೆ. ಅಲ್ಲೂ ಜನರಿಗೆ ಮಾಹಿತಿಯನ್ನು ನೀಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಎಸ್‌ಸಿ ಸಮುದಾಯ ಗಣತಿದಾರರು ಮನೆ ಮನೆಗೆ ಬಂದಾಗ ಮಾಹಿತಿಯನ್ನು ನೀಡಬೇಕು. ಗಣತಿದಾರರು ಮನೆಗೆ ಭೇಟಿ ಕೊಟ್ಟಾಗ ಜನರು ಇಲ್ಲದೇ ಹೋದರೆ ಶಿಬಿರದಲ್ಲಾದರೂ ಅಥವಾ ಆನ್ ಲೈನ್ ಮೂಲಕವೂ ಮಾಹಿತಿಯನ್ನು ನೀಡಬಹುದು ಎಂದು ಮನವಿ ಮಾಡಿದರು.
ಎಸ್‌ಸಿ ಒಳಮೀಸಲಾತಿ ಸಮೀಕ್ಷೆಗೆ ಸುಮಾರು 100 ಕೋಟಿ ಖರ್ಚು ಆಗಬಹುದು. ನಾಗಮೋಹನ್ ದಾಸ್ ಅವರು ಏನು ಶಿಫಾರಸು ಮಾಡುತ್ತಾರೆ ಅದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇವತ್ತಿನಿಂದ 17 ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವ ಕೆಲಸ ಆಗ್ತದೆ. ಸುಮಾರು 65 ಸಾವಿರ ಶಿಕ್ಷಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ.
10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರ್ತಾರೆ. ಮನೆ ಮನೆ ಭೇಟಿ ಕೊಡುವ ಜೊತೆಗೆ, ಮೊದಲ ಹಂತದಲ್ಲಿ 5-5-25 ರಿಂದ 17-5-2025 ವರೆಗೆ ನಡೆಯಲಿದೆ. ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಎನಾಬಲ್ ಮಾಡಲಾಗಿರುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯಾರೂ ತಪ್ಪಿಸಬಾರದು ಎಂದರು.
ನಾವು ಚುನಾವಣಾ ಪ್ರಣಾಳಿಕೆಯಲ್ಲೂ ವರದಿ ಜಾರಿ ಬಗ್ಗೆ ಘೋಷಣೆ ಮಾಡಿದ್ದೆವು. ಒಳ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್ ಕೂಡ ಹೇಳಿದೆ. ಸಮುದಾಯದ ಸಂಘಟನೆಗಳು, ಮುಖಂಡರಿಗೂ ನಾವು ಒಳ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದೆವು. ಆದ್ದರಿಂದ ದತ್ತಾಂಶ ಸಂಗ್ರಹ ಸಮೀಕ್ಷೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಮಾಹಿತಿ ಕೊಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಎಲ್ಲಾ ಸಂಘಟನೆಗಳೂ ಇದಕ್ಕೆ ಸಹಕರಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಶಿವರಾಜ್ ತಂಗಡಗಿ, ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕರಾದ ರೂಪಾ ಶಶಿಕಲಾ, ವಿಧಾನ ಪರಿಷತ್ ಸದಸ್ಯ ಸುದಾಮಾ ದಾಸ್, ನಾಸೀರ್ ಅಹಮದ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.