
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮೈಸೂರು ನಗರ ಕೇಂದ್ರ ಕಾರಾಗೃಹದ ವಾರ್ಡನ್ ಮಧುಕುಮಾರ್ ಅವರನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸರು ಬಂಧಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಕುಡಿದ ಮತ್ತಿನಲ್ಲಿ ಮಧುಕುಮಾರ್ ಅವಾಚ್ಯ ಪದ ಬಳಸಿ ರೆಕಾರ್ಡ್ ಮಾಡಿದ್ದ 5.33 ನಿಮಿಷಗಳ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ಮೇಲೆ ಸಿಎಂ ಗರಂ ಆದ ಘಟನೆ ಉಲ್ಲೇಖಿಸಿ ಏಪ್ರಿಲ್ 28ರಂದು ಮಧುಕುಮಾರ್ ವಿಡಿಯೋ ರೆಕಾರ್ಡ್ ಮಾಡಿ, ಸಿಎಂ ಅವರನ್ನು ನಿಂದಿಸಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಇಲಾಖೆ ವಿಚಾರಣೆ ಕಾಯ್ದಿರಿಸಿ ಮಧುಕರ್‌ರನ್ನು ಅಮಾನತು ಮಾಡಲಾಗಿತ್ತು. ಎಕ್ಸ್ ಆರ್ಮಿ ಮ್ಯಾನ್ ಹಾಗೂ ಸದ್ಯ ಮೈಸೂರು ಜೈಲ್ ವಾರ್ಡನ್ ಆಗಿ ಮಧುಕುಮಾರ್ ಕಾರ್ಯ ನಿರ್ವಹಿಸುತ್ತಿದ್ದರು.
ವಾರ್ಡನ್ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ: ಸಿಎಂ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿರುವ ಮೈಸೂರು ಕೇಂದ್ರ ಕಾರಾಗೃಹದ ವಾರ್ಡನ್ ಎಚ್.ಎನ್. ಮಧುಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಿ ಇಂದು ಬೆಳಗ್ಗೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು.