
ಪೆಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಪಾಕ್ ಜೊತೆ ಯುದ್ಧದ ಸನ್ನಿವೇಶ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಬುಧವಾರ (ಮೇ 7) ಭದ್ರತಾ ಮಾಕ್ ಡ್ರಿಲ್ ನಡೆಯಲಿದೆ. ಗೃಹ ಸಚಿವಾಲಯದ ನಿರ್ದೇಶನದಂತೆ ಕರ್ನಾಟಕದ ಮೂರು ಸ್ಥಳಗಳಲ್ಲಿ ಅಣಕು ಕವಾಯತುಗಳನ್ನು ನಡೆಸಲಾಗುವುದು ಎಂದು ಕರ್ನಾಟಕ ಪೊಲೀಸ್ ಇಲಾಖೆ ಹೇಳಿದೆ. ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕರು ಏನು ಮಾಡಬೇಕು ಎಂಬ ವಿಷಯಗಳ ಕುರಿತು ಕೇಂದ್ರ ಸರ್ಕಾರವು ಈ ಮಾಕ್ ಡ್ರಿಲ್ ಮೂಲಕ ಮಾರ್ಗಸೂಚಿಗಳನ್ನು ನೀಡುತ್ತಿದೆ. ಇಂದು ಸಂಜೆ 4 ಗಂಟೆಗೆ ಈ ಮಾಕ್ ಡ್ರಿಲ್ ನಡೆಯಲಿದೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಮಾಂಡೆಂಟ್ ಜನರಲ್ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಹೇಳಿರುವಂತೆ ಮೇ 7ರಂದು ಬೆಂಗಳೂರು, ಕಾರವಾರ ಮತ್ತು ರಾಯಚೂರಿನಲ್ಲಿ ಅಣಕು ಕವಾಯತುಗಳು ನಡೆಯಲಿವೆ. ಎನ್ಸಿಸಿ, ಎನ್ಎಸ್ಎಸ್, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ವೈದ್ಯಕೀಯ ವೃತ್ತಿಪರರು ಈ ಅಣಕು ಕವಾಯತುಗಳಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್ ಠಾಣೆಗಳು ಮತ್ತು ಅಗ್ನಿಶಾಮಕ ಠಾಣೆಗಳು ಸೇರಿದಂತೆ 35 ಸ್ಥಳಗಳಲ್ಲಿ ಸೈರನ್ಗಳನ್ನು ಅಳವಡಿಸಲಾಗಿದೆ.
ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ರಾಜ್ಯಗಳಿಗೆ ಸೂಚನೆ ಕೊಟ್ಟಿದೆ. ಯುದ್ಧದ ದಾಳಿ ಸಂದರ್ಭದಲ್ಲಿ ಜನರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಅಣಕು ತಾಲೀಮು ನಡೆಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರ ರಕ್ಷಣೆಗಾಗಿ ಪ್ರಾತ್ಯಕ್ಷಿಕವಾಗಿ ತರಬೇತಿ ನೀಡುವಂತೆ ಸಿವಿಲ್ ಡಿಫೆನ್ಸ್ಗಳಿಗೆ ಸೂಚನೆ ನೀಡಲಾಗಿದೆ. ಯುದ್ಧದ ಸನ್ನಿವೇಶದಲ್ಲಿ ನಾಗರಿಕರು ವಾಯುದಾಳಿಯ ಎಚ್ಚರಿಕೆ ಸೈರನ್ (ಸದ್ದು) ಅರಿತುಕೊಳ್ಳುವುದು, ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ನಾಗರಿಕರಿಗೆ ತರಬೇತಿ ನೀಡುವಂತೆ ಕೇಂದ್ರ ಹೇಳಿದೆ. ಇದರ ಜೊತೆಗೆ, ಪ್ರಮುಖ ಸ್ಥಾವರಗಳ ರಕ್ಷಣೆ ಹಾಗೂ ಅವುಗಳನ್ನು ಮರೆಮಾಚುವುದು, ಸ್ಥಳಾಂತರ ಮಾಡುವುದು ಸೇರಿ ಅಪಾಯದ ವೇಳೆ ಏನೆಲ್ಲ ಮಾಡಬೇಕು ಎಂಬ ಕುರಿತಾಗಿ ಪೂರ್ವಾಭ್ಯಾಸ ನಡೆಸುವಂತೆ ಸೂಚಿಸಿದೆ.